Sat. Nov 2nd, 2024

ಡಿ.ಕೆ.ಸುರೇಶ್ ಗೆಲುವು ಶತಸಿದ್ದ: ಸಿ.ಎಂ.ಸಿದ್ದರಾಮಯ್ಯ ಸ್ಪಷ್ಟ ನುಡಿ

Share this with Friends

ರಾಮನಗರ, ಮಾ. 28: ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಈ ಬಾರಿಯೂ ಗೆದ್ದೇ‌ ಗೆಲ್ಲುತ್ತಾರೆ ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಈ ಬಗ್ಗೆ ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿದೆ. ಈ ಆಧಾರದಲ್ಲಿ ಹೇಳುತ್ತಿದ್ದೇನೆ ಸುರೇಶ್ ಅವರು ಗೆಲುವು ಶತಸಿದ್ದ ಎಂದು ನುಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಸಭೆಯಲ್ಲಿ ಮಾತನಾಡಿದ ಸಿಎಂ,
ಡಿ.ಕೆ.ಸುರೇಶ್ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಿಲ್ಲೆಯ ಪ್ರಗತಿಗೆ ನಿರಂತರವಾಗಿ ದುಡಿಯುತ್ತಾರೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಮತ್ತೆ ಇವರನ್ನು ಅಭ್ಯರ್ಥಿಯನ್ನಾಗಿಸಿದೆ. ಇವರನ್ನು ನಿಮ್ಮ ಪ್ರತಿನಿಧಿಯಾಗಿ ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ ಇವರು ನಮ್ಮ ದ್ವನಿಯಾಗಿ ಕೆಲಸ ಮಾಡುತ್ತಾರೆ ಎಂದು ಭರವಸೆ ನೀಡಿದರು.

ಸರ್ಕಾರ ಬಂದ ದಿನದಿಂದಲೇ ನಾವು ಕೊಟ್ಟ ಮಾತನ್ನು ಈಡೇರಿಸುವ ಕೆಲಸ ಶುರು ಮಾಡಿದೆವು. ಎಂಟೇ ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಇವತ್ತಿನವರೆಗೂ ಕೊಟ್ಟ ಮಾತಿನಲ್ಲಿ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ಬಿಜೆಪಿಗೆ ಮತ ಹಾಕಿದರೆ ಏನು ಪ್ರಯೋಜನ ಎಂಬುದನ್ನು ನೀವೇ ಪ್ರಶ್ನಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಕುಟುಂಬಗಳಿಗೂ ನಮ್ಮ ಸರ್ಕಾರ ಹಣ ಜಮೆ ಮಾಡುತ್ತಿದೆ. ಪಕ್ಷ, ಜಾತಿ, ಧರ್ಮ ಯಾವುದನ್ನೂ ನೋಡದೆ ಇಡೀ ನಾಡಿನ ಜನತೆಗೆ ಅವರ ಕುಟುಂಬಗಳಿಗೆ ಉಚಿತ ಅಕ್ಕಿ, ಉಚಿತ ವಿದ್ಯುತ್ ಜತೆಗೆ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ, ನಿರುದ್ಯೋಗಿಗಳ ಖಾತೆಗೆ ಭತ್ಯೆಯನ್ನು ಜಮೆ ಮಾಡುತ್ತಿದೆ. ಹೀಗೆ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬ ಮತದಾರರ ನಂಬಿಕೆ ಉಳಿಸಿಕೊಂಡಿದೆ ಎಂದು ತಿಳಿಸಿದರು.

ಜನರ ನಡುವೆ ನಿಂತು ಜನರ ದಿನನಿತ್ಯದ ಕಷ್ಟ ಸುಖಗಳಿಗೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ ಅಥವಾ ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ ಎನ್ನುವುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ. ಡಿ.ಕೆ.ಸುರೇಶ್ ಅವರನ್ನು ಜನ ಗೆಲ್ಲಿಸಲು ತೀರ್ಮಾನಿಸಿ ಆಗಿದೆ ಎಂದು ಸಿಎಂ ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ.ಸುಧಾಕರ್, ಮಂಕಾಳ ವೈದ್ಯ , ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ವಿಧಾನ‌ ಪರಿಷತ್ ಸದಸ್ಯ ಸುದಾಮ ದಾಸ್ ಸೇರಿದಂತೆ ರಾಮನಗರ ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳು, ಜಿಲ್ಲಾ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


Share this with Friends

Related Post