ಹೊಸದಿಲ್ಲಿ.ಮಾ.29 : ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೇ ಕಾಂಗ್ರೆಸ್‌ಗೆ ಆದಾಯ ತೆರಿಗೆ ಶಾಕ್ ನೀಡಿದೆ. ಸುಮಾರು 1,700 ಕೋಟಿ ರೂ. ಮೊತ್ತದ ತೆರಿಗೆ ಪಾವತಿಸುವಂತೆ ಐಟಿ ನೋಟಿಸ್ ಜಾರಿ ನೀಡಿದೆ.
ಕಾಂಗ್ರೆಸ್ ಪಕ್ಷವನ್ನು ಅಕ್ಷರಶಃ ಆತಂಕಕ್ಕೆ ತಳ್ಳಿದೆ.ನಾಲ್ಕು ಮೌಲ್ಯಮಾಪನ ವರ್ಷಗಳ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಈ ನೋಟಿಸ್ ಬಂದಿರುವುದಾಗಿ ಪಕ್ಷ ಹೇಳಿಕೊಂಡಿದೆ.
1700 ಕೋಟಿ ರೂ. ಮೊತ್ತದ ನೋಟಿಸ್ 2017-18 ರಿಂದ 2020-21ರವರೆಗಿನ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದ ಹೊಸ ತೆರಿಗೆ ಬೇಡಿಕೆಯಾಗಿದೆ. ಇದರಲ್ಲಿ ದಂಡದ ಮೊತ್ತ ಹಾಗೂ ಬಡ್ಡಿಯೂ ಒಳಗೊಂಡಿದೆ. ಇದಲ್ಲದೆ ಕಾಂಗ್ರೆಸ್ ಇತರ ಮೂರು ಮೌಲ್ಯಮಾಪನ ವರ್ಷಗಳ ಆದಾಯದ ಮರುಮೌಲ್ಯಮಾಪನವನ್ನೂ ಎದುರುನೋಡುತ್ತಿದೆ. ಇದರ ಗಡುವು ಭಾನುವಾರಕ್ಕೆ ಕೊನೆಗೊಳ್ಳಲಿದೆ.
ಆದಾಯ ತೆರಿಗೆ ಇಲಾಖೆಯ ಈ ಕ್ರಮಕ್ಕೆ ತಡೆ ಕೋರಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ಕಾಂಗ್ರೆಸ್ ವಕೀಲ ಮತ್ತು ರಾಜ್ಯಸಭಾ ಸಂಸದ ವಿವೇಕ್ ಟಂಕಾ ಅವರು ನೋಟಿಸ್ ಬಂದಿರುವುದನ್ನು ದೃಢಪಡಿಸಿದ್ದು, ಐಟಿ ಕ್ರಮ ಪ್ರಜಾಸತ್ತಾತ್ಮಕ ವಿರೋಧಿ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಇದನ್ನು ಪಕ್ಷವು ಕಾನೂನಾತ್ಮಕವಾಗಿ ಎದುರಿಸುತ್ತದೆ ಎಂದು ಹೇಳಿದ್ದಾರೆ.