Fri. Nov 1st, 2024

ಬೆಂಗಳೂರಲ್ಲಿ ಜನರ ಬಳಿ ಹೋಗಿ ಮತ ಕೇಳುವ ಧೈರ್ಯ ಕಾಂಗ್ರೆಸ್‌ಗಿಲ್ಲ: ಅಶೋಕ್

Share this with Friends

ಬೆಂಗಳೂರು, ಮಾ.29: ಬೆಂಗಳೂರಿನಲ್ಲಿ ಜನರ ಬಳಿ ಹೋಗಿ ಮತ ಯಾಚಿಸುವ ಧೈರ್ಯ ಕಾಂಗ್ರೆಸ್‌ಗೆ ಇಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ಸಂಬಂಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಅಶೋಕ್ ಅವರು ಬಿಜೆಪಿ-ಜೆಡಿಎಸ್‌ ಸಮನ್ವಯ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಮೆಟ್ರೊ ಯೋಜನೆಯನ್ನು ಅಟಲ್‌ ಬಿಹಾರಿ ವಾಜಪೇಯಿ ನೀಡಿದರು. ಹಾಗೆಯೇ ವಿಮಾನ ನಿಲ್ದಾಣವನ್ನೂ ನೀಡಿದ್ದಾರೆ ಎಂದು ತಿಳಿಸಿದರು.

ಉಪನಗರ ರೈಲು ಯೋಜನೆ, ಕಾವೇರಿ ಕುಡಿಯುವ ನೀರಿನ ಯೋಜನೆಯನ್ನು ಬಿಜೆಪಿ ನೀಡಿದೆ. ಈ ಎಲ್ಲ ಕಾರಣಗಳಿಂದಾಗಿ ಜನರ ಬಳಿ ಹೋಗಿ ಮತ ಯಾಚಿಸುವ ಹಕ್ಕು ಬಿಜೆಪಿಗಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಕಳೆದ ಹತ್ತು ತಿಂಗಳಲ್ಲಿ ಬ್ರ್ಯಾಂಡ್‌ ಬೆಂಗಳೂರು ಎಂದು ಹೇಳಿ ಹಾರ್ಮ್‌ ಬೆಂಗಳೂರನ್ನು ಸೃಷ್ಟಿಸಿದೆ,ಈಗ ಬಾಯ್‌ ಬಾಯ್‌ ಬೆಂಗಳೂರು ಮಾಡಿದ್ದು, ಕುಡಿಯುವ ನೀರಿಲ್ಲದೆ ಜನರು ನಗರವನ್ನು ಬಿಟ್ಟು ಹೊರಟಿದ್ದಾರೆ ಎಂದು ಆಕ್ರೋಶ ಕಿಡಿಕಾರಿದರು.

ಕೇರಳ ಸರ್ಕಾರದಿಂದ ಐಟಿ ಕಂಪನಿಗಳ ಮುಖ್ಯಸ್ಥರಿಗೆ ಪತ್ರ ಬಂದಿದೆ. ಬೆಂಗಳೂರಲ್ಲಿ ಮುಖ ತೊಳೆಯಲು ಕೂಡ ನೀರಲ್ಲದಿರುವುದರಿಂದ ನಮ್ಮಲ್ಲಿಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ ಅನೇಕ ಕಂಪನಿಗಳು ನಗರವನ್ನು ಬಿಟ್ಟು ಹೋಗುತ್ತಿವೆ,ಕಾಂಗ್ರೆಸ್‌ನ ದುರಾಡಳಿತ, ದುರ್ವರ್ತನೆಯನ್ನು ನೋಡಿ ಜನರು ಕಾಂಗ್ರೆಸ್‌ಗೆ ಬಾಯ್‌ ಬಾಯ್‌ ಹೇಳಲಿದ್ದಾರೆ ಎಂದು ಭವಿಷ್ಯ ನುಡಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಬಲವಂತವಾಗಿ ಅಭ್ಯರ್ಥಿಯನ್ನು ಎಳೆದು ತಂದು ನಿಲ್ಲಿಸಿದೆ. ಇದು ಅವರ ಚುನಾವಣಾ ಗಂಭೀರತೆಯನ್ನು ತೋರಿಸುತ್ತದೆ ಎಂದು ಅಶೋಕ್ ಟೀಕಿಸಿದರು ‌

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಪರವಾಗಿ ಚುನಾವಣೆ ಪ್ರಚಾರ ನಡೆಸುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಶಾಸಕರು ಹಾಗೂ ಸಂಸದರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ತಲುಪಿಸಲಾಗುವುದು,
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜನರು ಬಿಜೆಪಿಗೆ ಕಳೆದ ಬಾರಿ 3.30 ಲಕ್ಷ ಲೀಡ್‌ ಕೊಟ್ಟಿದ್ದಾರೆ. ಈ ಬಾರಿ ಇನ್ನೂ ಒಂದು ಲಕ್ಷ ಹೆಚ್ಚು ಲೀಡ್‌ ಬರುವತ್ತ ಕಾರ್ಯನಿರ್ವಹಿಸುತ್ತೇವೆ ಎಂದು‌ ಅಶೋಕ್ ತಿಳಿಸಿದರು.


Share this with Friends

Related Post