ಹಾಸನ,ಮಾ.29: ಅಕ್ರಮವಾಗಿ ಮಾಂಸ ಮಾರಾಟ ಮಾಡಲು ಗೋವುಗಳನ್ನು ವಧೆ ಮಾಡುತ್ತಿದ್ದ ವೇಳೆ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ದಾಳಿ ವೇಳೆ ಹತ್ತು ಸಾವಿರ ಕೆಜಿ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆ, ಚನ್ನರಾಯಪಟ್ಟಣದ, ಬಾಗೂರು ರಸ್ತೆಯಲ್ಲಿ ಮಹಮದ್ ಅಬ್ದುಲ್ ಹಕ್ ಎಂಬುವವರಿಗೆ ಸೇರಿದ ಜಾಗದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ, ಚರ್ಮ ಸುಲಿದು ನೇತು ಹಾಕಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಈ ವೇಳೆ ಐದು ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಗೋವುಗಳನ್ನು ಹತ್ಯೆ ಮಾಡಿ ಅವುಗಳ ರಕ್ತವನ್ನು ಕೆರೆಗೆ ಹರಿಸುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.