ಕೋಲಾರ,ಮಾ,30: ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಗೆ ಕಗ್ಗಂಟಾಗಿದ್ದ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನ ಕೊನೆಗೂ ಫೈನಲ್ ಮಾಡಿದ್ದು, ಕೆ.ವಿ. ಗೌತಮ್ ಗೆ ಟಿಕೆಟ್ ನೀಡಿದೆ.ಕೋಲಾರದಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ರಮೇಶ್ ಕುಮಾರ್ ಹಾಗೂ ಸಚಿವ ಕೆಎಚ್ ಮುನಿಯಪ್ಪ ಅವರ ಬಣದ ನಡುವೆ ಭಾರೀ ತಿಕ್ಕಾಟ ನಡೆದಿತ್ತು.
ಕೆ.ವಿ. ಗೌತಮ್ ಬೆಂಗಳೂರಿನ ಮಾಜಿ ಮೇಯರ್ ಕೆ.ವಿಜಯಕುಮಾರ್ ಅವರ ಮಗ. ಕೋಲಾರ ಮೂಲದವರಾದ ಇವರು ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದಾರೆ. ಕೆ ವಿಜಯಕುಮಾರ್ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಪಕ್ಷದ ಸಂಘಟನೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ ಈ ಹಿನ್ನೆಲೆಯಲ್ಲಿ ಅವರ ಪುತ್ರನನ್ನು ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ, ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಕೋಲಾರದಲ್ಲಿ ಅಭ್ಯರ್ಥಿಯಾಗಿ ಕೆವಿ ಗೌತಮ್ ಅವರ ಹೆಸರನ್ನು ಒಪ್ಪಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಮಲ್ಲೇಶ್ ಬಾಬು ಅವರು ಕಣಕ್ಕೆ ಇಳಿಯಲಿದ್ದಾರೆ.