ಮೈಸೂರು ಮಾ.30 ಯುವ ಮತದಾರರು ಮುಕ್ತ ಹಾಗೂ ನ್ಯಾಯೋಚಿತವಾದ ಚುನಾವಣೆಯನ್ನು ಬೆಂಬಲಿಸಬೇಕು ಎಂದು
ಸಹಾಯಕ ಚುನಾವಣಾಧಿಕಾರಿ ಕುಮುದಾ ಶರತ್ ಮನವಿ ಮಾಡಿದರು.
ಹೆಚ್.ಡಿ.ಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಯುವ ಮತದಾರರ ಮತದಾನ ಜಾಗೃತಿ ಹಾಗೂ ಹಸ್ತಾಕ್ಷರ ಸಂಗ್ರಹ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಧರಣೇಶ್ ಎಸ್.ಪಿ ಅವರು ಮಾತನಾಡಿ, ಯಾವುದೇ ಆಸೆ ಆಮಿಷಗಳಿಗೆ ಯುವ ಮತದಾರರ ಒಳಗಾಗದೆ ಪ್ರಜಾ ಪ್ರಜಾಪ್ರಭುತ್ವವನ್ನು ಬಲಪಡಿಸಲು ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು.
ಜೊತೆಗೆ ತಮ್ಮ ಕುಟುಂಬದವರು, ನೆರೆಹೊರೆಯವರು, ಸಂಬಂಧಿಕರು ಹಾಗೂ ಮತದಾನದ ಬಗ್ಗೆ ಅಸಡ್ಡೆ ತೋರುವವರನ್ನು ಪ್ರೇರೇಪಿಸಿ ಮತಗಟ್ಟೆಗೆ ಕರೆದುಕೊಂಡು ಹೋಗಿ ಮತದಾನ ಮಾಡಿಸಬೇಕು ಎಂದು ಸಲಹೆ ನೀಡಿದರು.
ವಿಹೆಚ್ಎ (ವೋಟರ್ ಹೆಲ್ಫ್ ಲೈನ್ ಆಪ್) ನಲ್ಲಿ ನಿಮ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳೇ ಭಾರತದ ಭವಿಷ್ಯದ ಪ್ರಜೆಗಳು ವಿದ್ಯಾರ್ಥಿಗಳ ನಡೆ – ಮತಗಟ್ಟೆಯ ಕಡೆ ಇರಬೇಕು. ಆದ್ದರಿಂದ ಎಲ್ಲಾರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಂವಿಧಾನಿಕ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸಬೇಕು ಕಿವಿಮಾತು ಹೇಳಿದರು.
ಮೊದಲ ಬಾರಿಗೆ ಮತದಾನ ಮಾಡುವ ವಿದ್ಯಾರ್ಥಿನಿ ಶಿಲ್ಪಾ ಅವರು, ಮೊದಲ ಬಾರಿಗೆ ಮತದಾನ ಮಾಡಲು ತುಂಬಾ ಉತ್ಸುಕಳಾಗಿದ್ದೇನೆ ಹಾಗೂ ಸಂತೋಷವಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಯುವ ಮತದಾರರಿಂದ ಹಸ್ತಾಕ್ಷರ ಸಂಗ್ರಹ ಹಾಗೂ ಮಾನವ ಸರಪಳಿ ನಿರ್ಮಿಸಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಲಾಯಿತು.
ಈ ವೇಳೆ ತಾಲ್ಲೂಕು ಯೋಜನಾಧಿಕಾರಿ ಕೆ.ರಂಗಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಅರುಣ್ ಮತ್ತು ಸಿಬ್ಬಂದಿ ಹಾಜರಿದ್ದರು.