ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಇಬ್ಬರು ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಮತ್ತು ಪಿವಿ ನರಸಿಂಹ ರಾವ್ ಸೇರಿದಂತೆ ಐದು ಗಣ್ಯ ವ್ಯಕ್ತಿಗಳಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಮತ್ತು ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಲಾಯಿತು. ಕೇಂದ್ರ ಸರ್ಕಾರವು ಈ ವರ್ಷ ಭಾರತ ರತ್ನಕ್ಕೆ ಐದು ಹೆಸರುಗಳನ್ನು ಘೋಷಿಸಿತು, ಅದರಲ್ಲಿ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಕೂಡ ಸೇರಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರು ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಬಿಜೆಪಿ ನಾಯಕ ಅಡ್ವಾಣಿ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಪ್ರಶಸ್ತಿಯನ್ನು ಅವರ ಮೊಮ್ಮಗ ಜಯಂತ್ ಸಿಂಗ್ ಮತ್ತು ಪಿವಿ ನರಸಿಂಹರಾವ್ ಅವರ ಪ್ರಶಸ್ತಿಯನ್ನು ಅವರ ಪುತ್ರ ಪಿವಿ ಪ್ರಭಾಕರ್ ರಾವ್ ಸ್ವೀಕರಿಸಿದರು.ಎಂಎಸ್ ಸ್ವಾಮಿನಾಥನ್ ಅವರ ಪುತ್ರಿ ನಿತ್ಯಾ ರಾವ್ ಅವರು ತಮ್ಮ ತಂದೆಗಾಗಿ ಪ್ರಶಸ್ತಿಯನ್ನು ಪಡೆದರು ಮತ್ತು ಕರ್ಪೂರಿ ಠಾಕೂರ್ ಅವರ ಪ್ರಶಸ್ತಿಯನ್ನು ಅವರ ಮಗ ರಾಮ್ ನಾಥ್ ಠಾಕೂರ್ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.