ಮೈಸೂರು, ಮಾ.30: ಕಾವೇರಿ ಕ್ರಿಯಾಸಮಿತಿ ವತಿಯಿಂದ ಇಂದು ರಾಷ್ಟ್ರಪತಿಗಳಿಗೆ ಅಂಚೆ ಮೂಲಕ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಲಾಯಿತು.
ಮೈಸೂರಿನ ಅಶೋಕ ರಸ್ತೆಯಲ್ಲಿರುವ, ಕೇಂದ್ರ ಅಂಚೆ ಕಚೇರಿ ಮುಂಭಾಗ ರಾಷ್ಟ್ರಪತಿಗಳಿಗೆ ಅಂಚೆ ಮೂಲಕ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರವಾಗಿ ಮಧ್ಯಸ್ಥಿಕೆ ವಹಿಸಲು ಹಾಗೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿ ಅಂಚೆ ಚಳವಳಿ ಹಮ್ಮಿಕೊಳ್ಳಲಾಯಿತು.
ಕಾವೇರಿ ಕ್ರಿಯಾ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಕಾವೇರಿ ನೀರಿನ ಸಮಸ್ಯೆಯನ್ನು ಬರೆದು ರಾಷ್ಟ್ರಪತಿಗಳಿಗೆ ಅಂಚೆ ಪತ್ರವನ್ನು ಪೋಸ್ಟ್ ಮಾಡಲಾಯಿತು.
ಈ ವೇಳೆ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಬೀಕರ ಬರ ರಾಜ್ಯದಲ್ಲಿ ಉದ್ಭವಿಸಿದೆ. ನಮಗೆ ಇಲ್ಲಿ ಕುಡಿಯಲು ನೀರಿಲ್ಲ, ಇಂತಹ ಸಮಯದಲ್ಲೂ ಕಾವೇರಿ ನ್ಯಾಯ ಮಂಡಳಿ, ತಮಿಳುನಾಡಿನ ಅಣೆಕಟ್ಟೆಗಳಲ್ಲಿ ನೀರು ತುಂಬಿದ್ದರು ನೀರು ಹರಿಸಲು ಆದೇಶಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡಲೇ ರಾಷ್ಟ್ರಪತಿಗಳು ಮಧ್ಯಸ್ಥಿಕೆಯನ್ನು ವಹಿಸಿ ಅಲ್ಪಸ್ವಲ್ಪ ಉಳಿದಿರುವ ನೀರನ್ನು ನಮಗೆ ಕುಡಿಯಲು ಅನುವು ಮಾಡಿಕೊಡಬೇಕು, ನಮಗೆ ಶಾಶ್ವತವಾದ ಪರಿಹಾರವನ್ನು ರಾಷ್ಟ್ರಪತಿಗಳು ನೀಡಲೇಬೇಕೆಂದು ಒತ್ತಾಯಿಸಿ ಅಂಚೆಪತ್ರ ಚಳವಳಿ ನಡೆಸಿದ್ದೇವೆ ಎಂದು ತಿಳಿಸಿದರು.
ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ಬೋಗಾದಿ ಸಿದ್ದೇಗೌಡ, ಸಿಂದುವಳ್ಳಿ ಶಿವಕುಮಾರ್, ಕೃಷ್ಣಪ್ಪ, ನೇಹಾ, ಮಹದೇವ ಸ್ವಾಮಿ, ಶಿವಲಿಂಗಯ್ಯ , ಪ್ರಭುಶಂಕರ್, ರವೀಶ್, ಬಾಲಕೃಷ್ಣ, ಮಂಜುಳಾ, ಸೋಮೇಗೌಡ, ಅಶೋಕ್, ಹನುಮಂತಯ್ಯ, ಪ್ರಭಾಕರ, ಆಟೋ ಮಹಾದೇವ, ವಿಷ್ಣು, ರಮೇಶ್ ಮುಂತಾದವರು ಪಾಲ್ಗೊಂಡಿದ್ದರು.