Fri. Nov 1st, 2024

ಅಭ್ಯರ್ಥಿಗಳ ಹಣ ವೆಚ್ಚದ ಬಗ್ಗೆ ನಿಗಾವಹಿಸಿ:ವೆಚ್ಚ ವೀಕ್ಷಕ ಎ. ಸುರೇಶ್ ಸೂಚನೆ

Share this with Friends

ಮೈಸೂರು, ಮಾ.31: ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಲು ನಿಗದಿಪಡಿಸಿರುವ ವೆಚ್ಚದಂತೆ ಅಭ್ಯರ್ಥಿಗಳು ಹಣ ವೆಚ್ಚ ಮಾಡುತ್ತಿರುವ ಬಗ್ಗೆ ತೀವ್ರ ನಿಗಾ ಇಡಬೇಕೆಂದು ಹುಣಸೂರು- ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವೆಚ್ಚ ವೀಕ್ಷಕ ಎ. ಸುರೇಶ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯಕ ವೆಚ್ಚ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು,ಎಂಸಿಸಿ ತಂಡಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಸಹಾಯಕ ವೆಚ್ಚ ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್‍ಗಳು, ವೀಡಿಯೋ ಸರ್ವೆಲನ್ಸ್, ವಿಡಿಯೋ ವ್ಹಿಂಗ್ ತಂಡಗಳು, ಸ್ಟ್ಯಾಟಿಕ್ ಸರ್ವೆಲನ್ಸ್ ತಂಡಗಳು ಇನ್ನೂ ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿಗಳು ಈಗಾಗಲೇ ಚುನಾವಣಾ ಖರ್ಚು ವೆಚ್ಚದ ನಿಗಾ ಕುರಿತು ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಎಇಆರ್‍ಒ ಅಧಿಕಾರಿಗಳೊಂದಿಗೆ ಸಿದ್ದತೆ ಮಾಡಿಕೊಡಿದ್ದಾರೆ.

ಚುನಾವಣೆ ಕರ್ತವ್ಯವನ್ನು ನಿಷ್ಪಕ್ಷ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ನಿಯೋಜನೆಗೊಂಡ ಎಲ್ಲ ತಂಡಗಳೂ ಖರ್ಚು ವೆಚ್ಚಗಳ ಬಗ್ಗೆ ಗಮನ ವಹಿಸಬೇಕು. ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚಗಳ ಬಗ್ಗೆಯೂ ತೀವ್ರ ನಿಗಾ ಇಡಬೇಕು ಎಂದು ನಿರ್ದೇಶನ ನೀಡಿದರು.

ಚುನಾವಣಾ ಅಭ್ಯರ್ಥಿ ಪ್ರಚಾರಕ್ಕಾಗಿ ಬಂದ ಸಂದರ್ಭದಲ್ಲಿ, ತಂಡಗಳು ಕಾರ್ಯಕ್ರಮ ಅಥವಾ ಸಮಾರಂಭಗಳಲ್ಲಿ ಆಗುವ ಖರ್ಚು ವೆಚ್ಚಗಳ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಹೇಳಿದರು.

ಅನಧಿಕೃತವಾಗಿ ಮದ್ಯ ಸಾಗಾಣಿಕೆ ಹಾಗೂ ಸಂಗ್ರಹಣೆಯ ಬಗ್ಗೆ ತಂಡಗಳು ಹೆಚ್ಚು ನಿಗಾ ವಹಿಸಬೇಕು. ಸೂಕ್ಷ್ಮ ಸ್ಥಳಗಳಲ್ಲಿರುವ ಮದ್ಯದ ಅಂಗಡಿಗಳನ್ನು ಪಟ್ಟಿ ಮಾಡಿಕೊಂಡು ಅಬಕಾರಿ ಇಲಾಖೆ ಅಧಿಕಾರಿಗಳು ತೀವ್ರ ಗಮನ ಹರಿಸಬೇಕು ಎಂದರು.

ಬ್ಯಾಂಕ್ ಖಾತೆಗಳಲ್ಲಿ ನಡೆಯುವ ಸಂಶಯಾಸ್ಪದ ವಹಿವಾಟು, ಹೆಚ್ಚಿನ ಹಣ ವರ್ಗಾವಣೆ, ಒಂದು ಖಾತೆಯಿಂದ ಹೆಚ್ಚಿನ ಖಾತೆಗೆ ಹಣ ವರ್ಗಾವಣೆ ಕುರಿತಂತೆ ಪ್ರತಿದಿನ ಪರಿಶೀಲನೆ ನಡೆಸಬೇಕು ಎಂದು ಸುರೇಶ್ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಅವರು ಅಕೌಂಟಿಂಗ್ ಟೀಂ ನವರು ಶ್ಯಾಡೋ ರಿಜಿಸ್ಟರ್ ಸೇರಿದಂತೆ ವಿವಿಧ ಕಡತ ನಿರ್ವಹಣೆಯ ಬಗ್ಗೆ, ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕಾಗಿ ಅನುಮತಿ ನೀಡಲು ತೆರೆದಿರುವ ಏಕಗವಾಕ್ಷಿ ಕೇಂದ್ರ ಸೇರಿದಂತೆ ಮಾಡಿಕೊಂಡಿರುವ ವ್ಯವಸ್ಥೆಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.


Share this with Friends

Related Post