Fri. Nov 1st, 2024

ಶ್ರೀನಿವಾಸ್ ಪ್ರಸಾದ್ ಬೆಂಬಲ ಪಡೆಯಲು ಕಾಂಗ್ರೆಸ್,ಬಿಜೆಪಿ ಕಸರತ್ತು

Share this with Friends

ಮೈಸೂರು,ಏ.1: ರಾಜಕೀಯ ಬದ್ದ ವೈರತ್ವವನ್ನ ಮರೆತು ಮತ್ತೆ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್ ಒಂದಾಗಬಹುದಾ ಎಂಬ ಪ್ರಶ್ನೆ ಹರಿದಾಡುತ್ತಿದೆ.

ಇದಕ್ಕೆ ಕಾರಣ ಲೋಕಸಭಾ ಚುನಾವಣೆ,ಹಾಗಾಗಿ ಇಂತಹ ಪ್ರಶ್ನೆ ಕಾಂಗ್ರೆಸ್ ಪಾಳೆಯದಲ್ಲಿ ಎದ್ದಿದೆ.ಇನ್ನೆರಡು ದಿನಗಳಲ್ಲಿ ಸಿಎಂ ಸಿದ್ದು ಶ್ರೀನಿವಾಸ ಪ್ರಸಾದರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ದಶಕಗಳ ಹಿಂದೆ ರಾಜಕೀಯ ವಲಯದಲ್ಲಿ ತಮ್ಮ ಛಾಪು ಮೂಡಿಸಿದ್ದ ಈ ಜೋಡಿ ಕೆಲವು ಬೆಳವಣಿಗೆಯಿಂದ ದೂರವಾಗಿ ರಾಜಕೀಯ ಬದ್ದವೈರಿಗಳಾಗಿದ್ದರು.

ಸಿದ್ದರಾಮಯ್ಯ ಬೆಂಬಲಕ್ಕೆ ಸದಾ ನಿಲ್ಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರನ್ನ ಸಂಪುಟದಿಂದ ಕೈಬಿಟ್ಟಾಗ ಅವರು ಸಿಡಿದೆದ್ದರು, ಸಿದ್ದರಾಮಯ್ಯ ವಿರುದ್ದ ತೊಡೆತಟ್ಟಿ ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೀನಾಯವಾಗಿ ಸೋಲುಂಡರು.

ನಂತರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆದರು.

ಈ ಬೆಳವಣಿಗೆ ನಂತರ ಹಂತಹಂತದಲ್ಲೂ ಸಿದ್ದರಾಮಯ್ಯ ವಿರುದ್ದ ಹೇಳಿಕೆ ನೀಡುವ ಮೂಲಕ ಶ್ರೀನಿವಾಸ ಪ್ರಸಾದ್ ಕಿಡಿಕಾರುತ್ತಲೇ ಇದ್ದರು.

ಇದೀಗ ಈ ರಾಜಕೀಯ ವೈರತ್ವವನ್ನ ಮರೆತು ಸಿದ್ದರಾಮಯ್ಯ ಕೈ ಕುಲುಕಲು ಶ್ರೀನಿವಾಸ್ ಪ್ರಸಾದ್ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ಪಾಳೆಯದಲ್ಲೇ ಕೇಳಿ ಬರುತ್ತಿದೆ.

ಶ್ರೀನಿವಾಸ್ ಪ್ರಸಾದ್ ಅಳಿಯ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದೂ ಸಹ ಇದಕ್ಕೆ ಪುಷ್ಟಿ ನೀಡುತ್ತದೆ.

ಮೈಸೂರು ಕೊಡಗು ಲೋಕಸಭಾ ಚುನಾವಣೆಯಲ್ಲಿ ದಲಿತ ಮತಗಳು ಅತ್ಯಂತ ಮಹತ್ವ ಪಡೆಯುವುದರ ಹಿನ್ನಲೆ ಈ ಬೆಳವಣಿಗೆ ನಡೆಯುತ್ತಿದೆ.

ಶ್ರೀನಿವಾಸ್ ಪ್ರಸಾದ್ ಬೆಂಬಲ ಪಡೆಯಲು ಎರಡೂ ಪಕ್ಷಗಳ ಮುಖಂಡರು ಶ್ರೀನಿವಾಸ್ ಪ್ರಸಾದ್ ಮನೆ ಬಾಗಿಲು ತಟ್ಟಿದ್ದಾರೆ.

ಬಿಜೆಪಿ ಅಭ್ಯರ್ಥಿ ಯದುವೀರ್ ರವರು ಈಗಾಗಲೇ ಭೇಟಿ ನೀಡಿ ಬೆಂಬಲ ಕೋರಿದ್ದಾರೆ.ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಪರವಾಗಿ ಹೆಚ್.ಸಿ.ಮಹದೇವಪ್ಪ,
ವೆಂಕಟೇಶ್,ಡಾ.ಯತೀಂದ್ರ ಭೇಟಿ ಮಾಡಿದ್ದಾರೆ.ಈ ಎರಡೂ ಪಕ್ಷಗಳು ಶ್ರೀನಿವಾಸ್ ಪ್ರಸಾದ್ ಬೆಂಬಲಕ್ಕಾಗಿ ಕಸರತ್ತು ನಡೆಸುತ್ತಿವೆ.

ಬಿಜೆಪಿಯಿಂದ ಲೋಕಸಭೆಗೆ ಮರು ಆಯ್ಕೆಯಾದ ಶ್ರೀನಿವಾಸ್ ಪ್ರಸಾದ್ ಕೆಲವು ಬೆಳವಣಿಗೆ ಹಿನ್ನಲೆಯಲ್ಲಿ ತಮ್ಮ ಪಕ್ಷದ ನಾಯಕರ ವಿರುದ್ದವೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಸಂವಿಧಾನ ತಿದ್ದುಪಡಿ ಮಾಡುವ ವಿಚಾರದಲ್ಲಿ ಬಿಜೆಪಿ ತೆಗೆದುಕೊಂಡ ನಿರ್ಣಯಗಳನ್ನ ಶ್ರೀನಿವಾಸ್ ಪ್ರಸಾದ್ ವಿರೋಧಿಸಿದ್ದರು.

ಹಳೆ ಮುನಿಸು ಮರೆತು ಒಂದಾಗಲು ವೇದಿಕೆ ಸಜ್ಜಾಗುತ್ತಿದೆ,ಚುನಾವಣ ರಾಜಕೀಯದಿಂದ ನಿವೃತ್ತಿಯಾಗಿರುವ ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಸಿಎಂ ಸಿದ್ದು ಭೇಟಿ ಮಾಡಲಿದ್ದಾರೆ

ಕಾಂಗ್ರೆಸ್ ಪರ ಒಲವು ಇರುವುದರಿಂದಲೇ ಶ್ರೀನಿವಾಸಪ್ರಸಾದ್ ತಮ್ಮ ಅಳಿಯನನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಸಲಿದ್ದಾರೆ.

ಸಿದ್ದರಾಮಯ್ಯ ಅವರು ಮೂರು ದಿನಗಳ ಕಾಲ ತಮ್ಮ ಪಕ್ಷದ ಅಭ್ಯರ್ಥಿ ಲಕ್ಷ್ಮಣ್ ಪರ ಪ್ರಚಾರದಲ್ಲಿ ಭಾಗವಹಿಸಲಿದ್ದು ಇದೇ ಸಂದರ್ಭದಲ್ಲಿ ಶ್ರೀನಿವಾಸ ಪ್ರಸಾದ್ ಅವರನ್ನೂ ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದ್ದು ಪ್ರಸಾದ ಯಾವ ಪಕ್ಷಕ್ಕೆ ಸಿಗಲಿದೆ ಎಂಬುದೇ ಈಗಿನ ಪ್ರಶ್ನೆ.


Share this with Friends

Related Post