ಮೈಸೂರು,ಏ.1: ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಕಾರ್ಯ ಅವಿಸ್ಮರಣೀಯ ಎಂದು ಕರ್ನಾಟಕ ಮುಕ್ತ ವಿವಿ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಆರ್.ಹಚ್ ಪವಿತ್ರ ತಿಳಿಸಿದರು.
ಶ್ರೀಗಳು ದಣಿವರಿಯದೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಸಿದ್ದಗಂಗೆಯನ್ನು ಅಕ್ಷರಶಃ ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವ ವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರು ಎಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ದರಾಗಿದ್ದಾರೆ ಎಂದು ಹೇಳಿದರು.
ನಗರದ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಡಾ. ಶಿವಕುಮಾರ ಸ್ವಾಮೀಜಿಯವರ 117 ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವ ತತ್ವ ಭಿತ್ತಿ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವಂತಹ ಸಾಧನೆ ಮಾಡಿರುವ ಶಿವಕುಮಾರ ಸ್ವಾಮೀಜಿಗಳು ಮನುಕುಲಕ್ಕೆ ಮಾದರಿ ಎಂದು ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ,ಸ್ವಾಮೀಜಿಯವರು ಧರ್ಮ, ಜಾತಿ, ವರ್ಣ ಭೇದವಿಲ್ಲದೆ ಲಕ್ಷಾಂತರ ಮಂದಿಗೆ ಶಿಕ್ಷಣ ನೀಡುವ ಮೂಲಕ ಜ್ಞಾನದ ಬೆಳಕು ತೋರಿದರು ಎಂದು ಹೇಳಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ,ಅಪರೂಪದ ತಪಸ್ವಿ ಸ್ವಾಮೀಜಿಯವರು ಶಿಕ್ಷಣದ ಮಹತ್ವ ತಿಳಿದು ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮಾಡಿದರು. ಸರಳ ಸಜ್ಜನಿಕೆಯ ಅವರು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಈ ವೇಳೆ ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ ಮಾಡಿ ಮಾಡಲಾಯಿತು, 40 ಮಂದಿ ಸ್ವಯಂ ಪ್ರೇರಿತ ರಕ್ತದಾನ ಕೂಡಾ ಮಾಡಿದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಬಿಜೆಪಿ ಮುಖಂಡರಾದ ಸರಸ್ವತಿ ಪ್ರಸಾದ್, ಕೇಬಲ್ ವಿಜಿ, ಹೇಮಂತ್, ಚಂದ್ರು, ರಶ್ಮಿ, ಗಣೇಶ್ ಬಾವುಸಾರ್ ಮತ್ತಿತರರು ಹಾಜರಿದ್ದರು.