ಬೆಳಗಾವಿ (ಉಗಾರ ಖುರ್ದ):
ಕೃಷ್ಣಾ ನದಿಯಲ್ಲಿ ನೀರು ಇಲ್ಲದ ಕಾರಣ ನದಿ ತೀರದ ಜಮೀನುಗಳಿಗೆ ಒಂದು ಗಂಟೆ ವಿದ್ಯುತ ಪೂರೈಕೆ ಮಾಡಲು ಸರಕಾರದ ಆದೇಶ ಹಿನ್ನಲೆಯಲ್ಲಿ ಉಗಾರ ಖುರ್ದ, ಉಗಾರ ಬುದ್ರುಕ, ಕುಸನಾಳ, ಮಳವಾಡ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ರೈತರು ಉಗಾರ ಖುರ್ದ ಪಟ್ಟಣದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪಟ್ಟಣದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ಮುಖಾಂತರ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಮಾತನಾಡಿದ ರೈತ ಮುಖಂಡರಾದ ಪ್ರಪೂಲ್ ಥೋರುಶೆ ಕಳೆದ ಮೂರು ದಿನಗಳಿಂದ ನದಿ ತೀರದ ಜಮೀನುಗಳಿಗೆ ಒಂದು ಗಂಟೆ ವಿದ್ಯುತ್ ಪುರೈಸಲಾಗುತ್ತಿದ್ದು ಇದರಿಂದ ರೈತರಿಗೆ ಅನಾನುಕುಲವಾಗುತ್ತಿದೆ. ಜನ- ಜಾನುವಾರುಗಳಿಗೆ ಕುಡಿಯಲು, ಬೆಳೆಗಳಿಗೆ ನೀರಿಲ್ಲದೆ ಬಿಸಿಲಿನ ಹೊಡೆತ್ತಕ್ಕೆ ಕಮರಿ ಹೋದರೆ ರೈತರು ಜೀವನ ನಡೆಸುವುದು ತುಂಬಾ ಕಷ್ಟವಾಗಲಿದ್ದು,ಆದ ಕಾರಣ ಸರಕಾರ 7 ಗಂಟೆಗೆ ವಿದ್ಯುತ್ ಪೂರೈಸಿ ರೈತರಿಗೆ ಸಹಕಾರ ನೀಡಲಿ ಎಂದರು. ಒಂದು ವೇಳೆ ರೈತರ ಜಮೀನುಗಳಿಗೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಲು ಹಿಂದೇಟು ಹಾಕಿದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಮಯದಲ್ಲಿ ಮಹಾದೆವ ಕಟಗೇರಿ, ಗಿರಿಮಲ್ಲ ಅಥಣಿ, ಸತ್ಯಪ್ಪ ಕಾಗವಾಡೆ ,ವಿಜಯ ಥೋರುಶೇ,ಶ್ರೀಶೈಲ ಗುರವ,ಗುಂಡು ಪಾಟೀಲ,ಸಂತೋಷ ಕನ್ನಕೋಡೆ,ವಿಜಯ ಖೋತ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.