ಮೈಸೂರು.ಎ.02 : ಮುಂದಿನ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳಿದರು. ಆದರೆ ನಾನು ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ. ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವಯಸ್ಸು ಆಗುತ್ತದೆ. 83 ವಯಸ್ಸು ಆದ ಮೇಲೆ ಇಷ್ಟೊಂದು ಉತ್ಸಾಹದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಗೊತ್ತಿದೆ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತದೆ. ಇದಕ್ಕೆ ಚುನಾವಣಾ ರಾಜಕಾರಣ ಸಾಕು ಎಂದಿಕೊಂಡಿದ್ದೇನೆ ಎಂದು ಹೇಳಿದರು.
ಮೈಸೂರು, ಚಾಮರಾಜನಗರ ಮಾತ್ರವಲ್ಲ 28 ಕ್ಷೇತ್ರ ವಿಚಾರದಲ್ಲೂ ನಾನು ಗಂಭೀರವಾಗಿದ್ದೇನೆ. ಮತ್ತೊಂದು ಬಾರಿ ಈ ಕಡೆ ಭಾಗಕ್ಕೆ ಪ್ರವಾಸಕ್ಕೆ ಬರುತ್ತೇನೆ. ಬಿಜೆಪಿವರು ಬಂದರೇ ಬಡವರ ಕಾರ್ಯಕ್ರಮಗಳು ನಿಂತು ಹೋಗುತ್ತವೆ. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಹೆಚ್ಚು ಲೀಡ್ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇಲ್ಲ :
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇಲ್ಲ. ಸುಮ್ಮನೆ ಕೆಲವೊಮ್ಮೆ ಊಹಾಪೋಹದ ವರದಿ ಬರೆಯುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವ ಹಣದ ಸಮಸ್ಯೆ ಇಲ್ಲ. ಒಂದೆರಡು ಕಡೆ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವಂತೆ ಹೇಳಿದ್ದೇನೆ. ಚುನಾವಣೆ ಇರುವುದರಿಂದ ಸಭೆ ಮಾಡಲು ಆಗುತ್ತಿಲ್ಲ ಅಷ್ಟೇ ಯಾವ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎಂದರು.