ಮೈಸೂರು, ಏ.2: ನನಗೆ ಯಾವುದೇ ಟೆನ್ಷನ್ ಇಲ್ಲಾ,ಆತಂಕವೂ ಇಲ್ಲ ನಾನು ಕೂಲ್ ಆಗಿ ದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,
ನಾನು ಆರಾಮವಾಗಿರೋದು ಕೂಡ ನನ್ನ ಆರೋಗ್ಯದ ಗುಟ್ಟು ಎಂದು ನಗೆ ಬೀರಿದರು.
ಮುಂದಿನ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ತೀರ್ಮಾನಿಸಿದ್ದೇನೆ.
ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳುತ್ತಲೇ ಇದ್ದಾರೆ ಆದರೆ ನಾನು ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವಯಸ್ಸು ಆಗುತ್ತದೆ,83 ಆದ ಮೇಲೆ ಉತ್ಸಾಹದಲ್ಲಿ ಕೆಲಸ ಮಾಡಲು ಆಗುವುದಿಲ್ಲ, ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತೆ ಅದಕ್ಕೆ ಚುನಾವಣಾ ರಾಜಕಾರಣ ಸಾಕು ಎಂದಿಕೊಂಡಿದ್ದೇನೆ ಎಂದು ಹೇಳಿದರು.
ವರುಣದಲ್ಲಿ ಭಾವನಾತ್ಮಕವಾಗಿ ಮತ ಕೇಳಿದ ವಿಚಾರದ ಬಗ್ಗೆ ಸಿಎಂ ಪ್ರಸ್ತಾಪಿಸಿ, ಅದೇನು ಭಾವನಾತ್ಮಕ ಏನಲ್ಲ,ಹೆಚ್ಚು ಲೀಡ್ ಬೇಕು ಎಂದು ಸ್ವಕ್ಷೇತ್ರದವರನ್ನ ಕೇಳಿದ್ದೇನೆ ಅಷ್ಟೇ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಮಗೆ ಬರಿ 9 ಸಾವಿರ ಲೀಡ್ ಬಂದಿತ್ತು. ಈ ಬಾರಿ ಅದನ್ನ 60 ಸಾವಿರಕ್ಕೆ ಮುಟ್ಟಿಸಿ ಎಂದು ಹೇಳಿದ್ದೇನೆ,ಅದಕ್ಕೆ ಬೇರೆ ರೀತಿಯ ವಿಶ್ಲೇಷಣೆ ಏನಿಲ್ಲ,ಅದು ನನ್ನ ಸಹಜವಾದ ಮಾತುಗಳು ಸಿಎಂ ತಿಳಿಸಿದರು.
ಮೈಸೂರು ಚಾಮರಾಜನಗರ ಮಾತ್ರವಲ್ಲ 28 ಕ್ಷೇತ್ರ ವಿಚಾರದಲ್ಲೂ ನಾನು ಗಂಭೀರವಾಗಿದ್ದೇನೆ. ಮತ್ತೊಂದು ಬಾರಿ ಈ ಭಾಗಕ್ಕೆ ಪ್ರವಾಸಕ್ಕೆ ಬರುತ್ತೇನೆ ಎಂದು ಹೇಳಿದರು.
ಅಮಿತ್ ಶಾ ರಾಜ್ಯ ಭೇಟಿ ಕುರಿತು ಮಾತನಾಡಿದ ಸಿಎಂ,
ಅಮಿತ್ ಶಾಗೆ ಕನ್ನಡಿಗರ ಮತ ಕೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ನಮಗೆ ಬರಗಾಲದ ಪರಿಹಾರ ಐದು ಪೈಸೆಯೂ ಬಂದಿಲ್ಲ. ಪರಿಹಾರ ಕೊಡದೆ ಹೇಗೆ ಬಂದು ಇಲ್ಲಿ ಮತ ಕೇಳುತ್ತಾರೆ ಎಂದು ಸಿಎಂ ಕಿಡಿಕಾರಿದರು.
ಅಮಿತ್ ಶಾ ತಮ್ಮ ಮನೆಯಿಂದ ಏನು ಬರ ಪರಿಹಾರದ ಹಣ ಕೊಡುತ್ತಾರಾ.
ಅದೇನು ನಮಗೆ ಭಿಕ್ಷೆನಾ ಹೇಳಿ, ಎಚ್.ಡಿ ಕುಮಾರಸ್ವಾಮಿ ರಾಜ್ಯಕ್ಕೆ ಪರಿಹಾರ ಕೊಡಿಸಿ ನಂತರ ಕರೆದುಕೊಂಡು ಬರಬೇಕಿತ್ತು ಎಂದು ಕಟುವಾಗಿ ನುಡಿದರು.
ಮಂಡ್ಯದ ಸ್ಪರ್ಧೆ ದೇವರ ಇಚ್ಚೆ ಎಂಬ ಎಚ್.ಡಿ.ಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಮಗನನ್ನ ನಿಲ್ಲಿಸುವಾಗ ಯಾರ ಇಚ್ಚೇ ಇತ್ತೊ, ಈಗ ದೇವರು ಎಂದರೆ ಆಗ ಯಾರ ಇಚ್ಚೆ ಎಂದು ಪ್ರಶ್ನಿಸಿ,ಈ ಬಾರಿ ಜೆಡಿಎಸ್ ನವರು ಮೂರು ಕ್ಷೇತ್ರದಲ್ಲು ಸೋಲುತ್ತಾರೆಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.