ಮೈಸೂರು, ಏ.2: ಅಯೋಧ್ಯಯಿಂದ ಮರಳಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದಿಂದ ಗುರುವಂದನೆ ಸಲ್ಲಿಸಲಾಯಿತು.
ಟಿ.ಕೆ ಲೇಔಟ್ ನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ
ಅಯೋಧ್ಯೆಯಲ್ಲಿ ಬಾಲರಾಮಚಂದ್ರ ದೇವರನ್ನು ಪ್ರತಿಷ್ಠಾಪನೆ ಮಾಡಿ, 48 ದಿನಗಳ ಮಂಡಲೋತ್ಸವ ಹಾಗೂ ಮಂಗಳೋತ್ಸವ ಯಶಸ್ವಿಯಾಗಿ ಪೂರೈಸಿ ಮೈಸೂರಿಗೆ ಆಗಮಿಸಿದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ ಪ್ರಕಾಶ್ ನೇತೃತ್ವದಲ್ಲಿ ಗುರುವಂದನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಡಿ. ಟಿ ಪ್ರಕಾಶ್ ಅವರು ಹಿಂದುಗಳ ಪಾಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರವಾದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ನಂತರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಜನವರಿ 30 ರಿಂದ ಮಾರ್ಚ್ 11 ವರೆಗೆ ಶ್ರದ್ಧಾಭಕ್ತಿಯಿಂದ ಮಂಡಲ ಪೂಜೆ ನೆರವೇರಿದೆ, ಇದೀಗ ಆ ಪವಿತ್ರ ಕ್ಷೇತ್ರದಿಂದ ಆಗಮಿಸಿರುವ ಶ್ರೇಷ್ಠ ಸಂತರಾದ ಶ್ರೀಗಳಿಗೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಎಲ್ಲಾ ಪದಾಧಿಕಾರಿಗಳ ಪರವಾಗಿ ಅಭಿನಂದನೆಗಳು ಎಂದು ತಿಳಿಸಿದರು
ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿ ನಿಂತು ಪ್ರತಿಮೆಗೆ ಪ್ರಾಣ ಪ್ರತಿಷ್ಠೆ ಮಾಡಿದ ಪೇಜಾವರ ಶ್ರೀಗಳನ್ನು ಕಂಡು ಕನ್ನಡಿಗರು ರೋಮಾಂಚನಗೊಂಡಿದ್ದರು. ಸಾಂಸ್ಕೃತಿಕ ಪುನರುತ್ಥಾನದ ಕಾಲಘಟ್ಟದಲ್ಲಿ ಶ್ರೀಗಳ ಈ ಮಹತ್ವದ ಪಾತ್ರ ಎಲ್ಲರ ಗಮನ ಸೆಳೆದಿತ್ತು ಎಂದು ಹೇಳಿದರು.
ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಶಾಸ್ತ್ರಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಉದ್ಯಮಿ ಅಪೂರ್ವ ಸುರೇಶ್, ಡಾ. ಕೆ. ಚಕ್ರಪಾಣಿ, ಎಸ್. ಬಿ ವಾಸುದೇವಮೂರ್ತಿ, ಮಿರ್ಲೆ ಪನೀಶ್, ಸುಚಿಂದ್ರ, ಮಂಜುನಾಥ್, ಮತ್ತಿತರ ಭಕ್ತಾದಿಗಳು ಹಾಜರಿದ್ದರು.