ವಯನಾಡ್.ಎ.4 : ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ನಾಮಪತ್ರ ಸಲ್ಲಿಸಿದರು. ವಯನಾಡಿನ ಹಾಲಿ ಸಂಸದರಾಗಿರುವ ರಾಹುಲ್ ಗಾಂಧಿ 2ನೇ ಬಾರಿಗೆ ಇದೇ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಎದುರಿಸುತ್ತಿದ್ದಾರೆ.
ಇನ್ನು ನಾಮಪತ್ರದ ಜೊತೆ ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ಆಸ್ತಿ ವಿವರವನ್ನು ಸಲ್ಲಿಸಬೇಕು. ಆ ಹಿನ್ನೆಲೆಯಲ್ಲಿ ಇಂದು ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ ಅವರ ಆಸ್ತಿ ವಿವರ ನೋಡೋದಾದರೆ ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ, ಮಾಜಿ ಕಾಂಗ್ರೆಸ್ ಮುಖ್ಯಸ್ಥರ ಆಭರಣ ಆಸ್ತಿಯ ಮೌಲ್ಯ 4.2 ಲಕ್ಷ ರೂ.ಅವರ ಚರಾಸ್ತಿಯ ಒಟ್ಟು ಮೌಲ್ಯ 9.24 ಕೋಟಿ ರೂ., ಸ್ಥಿರಾಸ್ತಿಯ ಒಟ್ಟು ಮೌಲ್ಯ 11.14 ಕೋಟಿ ರೂ. ಅವರ ಒಟ್ಟು ಆಸ್ತಿಯ ಮೌಲ್ಯ 20 ಕೋಟಿ ರೂ.ಗಿಂತ ಹೆಚ್ಚು ಎಂದು ನಾಮಪತ್ರದ ಜೊತೆಗೆ ಸಲ್ಲಿಸಲಾದ ವಿವರಗಳಲ್ಲಿ ತಿಳಿಸಲಾಗಿದೆ.
ಅವರು 4.3 ಕೋಟಿ ರೂ.ಗಳ ಷೇರು ಮಾರುಕಟ್ಟೆ ಹೂಡಿಕೆ, 3.81 ಕೋಟಿ ರೂ.ಗಳ ಮ್ಯೂಚುವಲ್ ಫಂಡ್ ಠೇವಣಿ ಮತ್ತು 26.25 ಲಕ್ಷ ರೂ.ಗಳನ್ನು ಬ್ಯಾಂಕ್ ಖಾತೆಯಲ್ಲಿ ಹೊಂದಿದ್ದಾರೆ.
2022-23ರ ಹಣಕಾಸು ವರ್ಷದಲ್ಲಿ 55,000 ರೂ ನಗದು ಮತ್ತು ಒಟ್ಟು ಆದಾಯ 1.02 ಕೋಟಿ ರೂ. ಎಂದು ರಾಹುಲ್ ಗಾಂಧಿ ಘೋಷಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಬಳಿ 15.2 ಲಕ್ಷ ಮೌಲ್ಯದ ಚಿನ್ನದ ಬಾಂಡ್ ಗಳಿವೆ. ಅವರು ರಾಷ್ಟ್ರೀಯ ಉಳಿತಾಯ ಯೋಜನೆಗಳು, ಅಂಚೆ ಉಳಿತಾಯ ಮತ್ತು ವಿಮಾ ಪಾಲಿಸಿಗಳಲ್ಲಿ 61.52 ಲಕ್ಷ ರೂ.ಗಳ ಹೂಡಿಕೆ ಮಾಡಿದ್ದಾರೆ.