Fri. Nov 1st, 2024

ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು- ಪ್ರಧಾನಿಗೆ ಸಿಎಂ ಪ್ರಶ್ನೆ

Share this with Friends

ಚಿತ್ರದುರ್ಗ, ಏ. 4: ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು ಮಿಸ್ಟರ್ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಶಾಸಕರುಗಳಿಗೆ ಕೋಟಿ ಕೋಟಿ ಕೊಡುವುದಕ್ಕೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು. ಅದು ಕಪ್ಪು ಹಣ ಅಲ್ಲವೇ ದೇಶದ ಜನಕ್ಕೆ ಉತ್ತರಿಸಿ ಎಂದು ಒತ್ತಾಯಿಸಿದರು.

ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಚಂದ್ರಪ್ಪ ಅವರ ಪರವಾಗಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಕೊಡುತ್ತೇವೆ ಅಂದಿರಲ್ಲಾ ಕೊಟ್ರಾ, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂತ ಹೇಳಿದ್ದಿರಿ ಆದಾಯ ಒಂದು ರೂಪಾಯಿ ಕೂಡ ಹೆಚ್ಚಾಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರಲ್ಲಾ ಮಾಡಿದ್ರಾ ಮೋದಿಯವರೇ ಎಂದು ಕಾರವಾಗಿ ಸಿಎಂ ಪ್ರಶ್ನಿಸಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಗ್ಯಾಸ್, ರಸಗೊಬ್ಬರ, ಎಣ್ಣೆ, ಕಾಳು ಬೇಳೆ ಎಲ್ಲವೂ ಅತ್ಯಂತ ಕಡಿಮೆ ಬೆಲೆಗೆ ಸಿಗುವಂತೆ ಮಾಡ್ತೀನಿ ಅಂದಿದ್ರಲ್ಲಾ ಮಾಡಿದ್ರಾ ಎಂದು ಕೇಳಿದರು.

ನಿಮ್ಮ ಕಾಲದಲ್ಲಿ ಆದ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ಕೊಂಚ ನೆಮ್ಮದಿ ನೀಡಬೇಕು ಎಂಬ ಕಾರಣದಿಂದ ಐದು ಗ್ಯಾರಂಟಿ ಜಾರಿ ಮಾಡಿದೆವು. ಪ್ರತೀ ಕುಟುಂಬಕ್ಕೆ 4 ರಿಂದ 6 ಸಾವಿರ ರೂಪಾಯಿ ಉಳಿತಾಯವಾಗಿ ನನ್ನ ಜನರ ಕೊಳ್ಳುವ ಶಕ್ತಿ ಹೆಚ್ಚಾಯಿತು, ಇದು ಸಾಧ್ಯವಾಗಿದ್ದು ಕಾಂಗ್ರೆಸ್ ಸರ್ಕಾರದಿಂದ ಮಿಸ್ಟರ್ ಮೋದಿಯವರೇ ಎಂದು ಟಾಂಗ್ ನೀಡಿದರು.

ಈ ದೇಶದ ಶೇ 95 ರಷ್ಟು ಬಹುಸಂಖ್ಯಾತ ಜನ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುತ್ತಿರುವುದು ನಮ್ಮ ಸಂವಿಧಾನ. ಈ ಸಂವಿಧಾನವನ್ನು ಬದಲಾಯಿಸುತ್ತೀವಿ ಎನ್ನುವುದು ಬಿಜೆಪಿಯ ಅಜೆಂಡಾ ಎಂದು ಸಿದ್ದು ವಾಗ್ದಾಳಿ ನಡೆಸಿದರು.

ದಲಿತರು, ಶ್ರಮಿಕರು, ದುಡಿಯುವ ವರ್ಗಗಳಿಗೆ ಏನೇನೂ ಮಾಡಿಲ್ಲ. ಕಾರಜೋಳ ಅವರ ಬಳಿ ಸಿಕ್ಕಾಪಟ್ಟೆ ಹಣ ಇರಬಹುದು. ಆದರೆ ಚಂದ್ರಪ್ಪ ಅವರಲ್ಲಿ ಜನಸೇವೆ ಮಾಡುವ ಸಜ್ಜನಿಕೆ, ಕಾಳಜಿ ಇದೆ. ಆದ್ದರಿಂದ ಚಿತ್ರದುರ್ಗದ ಜನತೆ ಮಿಸ್ಟರ್ ಕಾರಜೋಳ್ ಪ್ಲೀಸ್ ಗೋ ಬ್ಯಾಕ್ ಎಂದು ಒಕ್ಕೋರಲಿನಿಂದ ಹೇಳಬೇಕು ಎಂದು ಸಿಎಂ ಕರೆ ನೀಡಿದರು.

ಬಿಜೆಪಿ ರಾಜ್ಯಕ್ಕೆ ಮಾಡಿದ ದ್ರೋಹ ಒಂದೆರಡಲ್ಲ. ರಾಜ್ಯಕ್ಕೆ ಪ್ರವಾಹ ಬಂದಾಗ, ಬರಗಾಲ ಬಂದಾಗ ರಾಜ್ಯದ ಜನರ ಕಡೆ ತಿರುಗಿ ಕೂಡ ನೋಡಲಿಲ್ಲ. ರಾಜ್ಯದ ಪಾಲಿನ ಬರಗಾಲದ ಅನುದಾನವನ್ನು ಒಂದು ರೂಪಾಯಿ ಕೂಡ ಕೊಡಲಿಲ್ಲ ಎಂದು ಆರೋಪಿಸಿದರು.

ಆರ್ ಎಸ್ ಎಸ್ ನಲ್ಲಿ ಬಿಜೆಪಿ ಯವರಿಗೆ ಸುಳ್ಳು ಹೇಳುವ ತರಬೇತಿ ಕೊಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ರಾಜ್ಯದ ಜನರ ಪಾಲಿನ ಬರಗಾಲದ ಹಣ ಏಕೆ ವಾಪಾಸ್ ಕೊಡಲಿಲ್ಲ ಎಂದು ನಾಡಿನ ಜನತೆ ಪ್ರಶ್ನೆ ಕೇಳಿದರೆ ರಾಜ್ಯ ಸರ್ಕಾರ 3 ತಿಂಗಳು ಲೇಟಾಗಿ ಮನವಿ ಮಾಡಿದ್ದಾಗಿ ಅಮಿತ್ ಶಾ ಭಯಾನಕ ಹಸಿ ಸುಳ್ಳು ಹೇಳಿದರು ಎಂದು ಸಿದ್ದರಾಮಯ್ಯ ಟೀಕಿಸಿದರು.

ಸಚಿವರಾದ ಸತೀಶ್ ಜಾರಕಿಹೊಳಿ, ಡಿ.ಸುಧಾಕರ್, ಲೋಕಸಭಾ ಅಭ್ಯರ್ಥಿ ಚಂದ್ರಪ್ಪ, ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ರಘುಮೂರ್ತಿ,ವೀರೇಂದ್ರ ಪಪ್ಪಿ, ಪಾವಗಡ ವೆಂಕಟೇಶ್, ಗೋವಿಂದಪ್ಪ, ಬಸಂತಪ್ಪ ಸೇರಿ ಚಿತ್ರದುರ್ಗ ದಾವಣಗೆರೆ ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರುಗಳು, ಬ್ಲಾಕ್ ಮುಖಂಡರುಗಳು ಉಪಸ್ಥಿತರಿದ್ದರು.


Share this with Friends

Related Post