ಮೈಸೂರು,ಏ.6: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ 108 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಸೂಚಿಸಿದರು
ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜನಿಯರುಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಜಲಮೂಲಗಳ ಸಂರಕ್ಷಣೆ,ನಿರ್ವಹಣೆ ಹಾಗೂ ದುರಸ್ಥಿ ಕಾರ್ಯಗಳನ್ನು ಕೈಗೊಂಡು ಜನ,ಜಾನುವಾರುಗಳಿಗೆ ನೀರು ಒದಗಿಸಬೇಕೆಂದು ಹೇಳಿದರು
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ರಂಜಿತ್ ಮಾತನಾಡಿ ನೀರಿನ ಕೊರತೆ ಇರುವ ಕಡೆ 9 ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿದೆ ಹಾಗೂ ಕಲ ಹಳ್ಳಿಗಳಿಗೆ ಹಬ್ಬಗಳ ಸಂದರ್ಭದಲ್ಲಿ ಟ್ಯಾಂಕರ್ ನೀರು ಕೊಡಲಾಗಿದೆ . ಪಿರಿಯಾಪಟ್ಟಣದ 9 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ ಎಂದು ಹೇಳಿದರು
ವಿಫಲವಾದ ಕೊಳವೆ ಬಾವಿಗಳನ್ನು ತಕ್ಷಣ ಮುಚ್ಚಲು ಕ್ರಮವಹಿಸಿ, ವಿಜಯಪುರದಲ್ಲಿ ಆದಂತಹ ಘಟನೆಗಳು ಎಲ್ಲಿಯೂ ಮರುಕಳಿಸಬಾರದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಂದು ಕಾಲರಾ ಪ್ರಕರಣ ವರದಿಯಾಗಿದ್ದು,ಸುತ್ತಲಿನ 600 ಮನೆಗಳ ತಪಾಸಣೆ ಮಾಡಲಾಗಿದೆ, ಸುತ್ತಮುತ್ತ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಬರ ಪರಿಸ್ಥಿತಿ ಇರುವುದರಿಂದ ಬ್ಯಾಂಕಿನವರು ಸಾಲ ವಸೂಲಾತಿಯಲ್ಲಿ ಅಮಾನವೀಯವಾಗಿ ನಡೆದುಕೊಳ್ಳಬಾರದು ಎಂದು ಬ್ಯಾಂಕ್ ಸಿಬ್ಬಂದಿಗಳಿಗೆ ಸೂಚಿಸಲಾಯಿತು
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ರೈತ ಮುಖಂಡರುಗಳು ಕೆಲ ಗ್ರಾಮಗಳಲ್ಲಿ ಮೇವಿನ ಕೊರತೆಯಿದೆಯೆಂದು ಹೇಳುತ್ತಾರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯಿರುವ ಹಳ್ಳಿಗಳಿಗೆ ಭೇಟಿ ನೀಡಿ,ಹಾಗೂ ಗಡಿ ಭಾಗಗಳಲ್ಲಿ ಮೇವು ಹೊರರಾಜ್ಯಗಳಿಗೆ ಹೋಗದಂತೆ ನೋಡಿಕೊಳ್ಳಿ ಎಂದು ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ನಾಗರಾಜು ಅವರಿಗೆ ಡಿಸಿ ಸೂಚಿಸಿದರು.
ಸಭೆಯಲ್ಲಿ ಜಿ.ಪಂ.ಸಿಇಒ ಗಾಯತ್ರಿ ಕೆ.ಎಂ, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.