ಮೈಸೂರು ಏ.6: ಮತದಾರರಲ್ಲಿ ಚುನಾವಣಾ ಅರಿವು ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ
ನಗರದಲ್ಲಿಂದು ವಿಂಟೇಜ್ ಕಾರ್ ರ್‍ಯಾಲಿ
ಹಮ್ಮಿಕೊಂಡಿದ್ದವು.
ಟೌನ್ ಹಾಲ್ ನಿಂದ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆಯ ಮೂಲಕ ಪುರಭವನದವರೆಗೆ ವಿಂಟೇಜ್ ಕಾರ್ ರ್‍ಯಾಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ವೇಳೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ, 70 ರಿಂದ 75 ವರ್ಷಗಳ ಇತಿಹಾಸವಿರುವ ಈ ಚುನಾವಣೆ ಮತ್ತು ವಿಂಟೇಜ್ ಕಾರ್ ಅನ್ನು ಹೋಲಿಸಿದರೆ ಪ್ರತಿವರ್ಷವೂ ಅದರ ಮಹತ್ವ ಹಾಗೂ ಛಾಪು ಹೆಚ್ಚಾಗುತ್ತಲೇ ಇದೆ ಎಂದು ತಿಳಿಸಿದರು.
ಪ್ರಜೆಗಳೆಲ್ಲರೂ ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಯಜಮಾನರು, ಇದನ್ನು ಹೆಚ್ಚಿನ ಜಾಗರೂಕತೆಯಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ,ಹಾಗಾಗಿ ಪ್ರತಿಭರಿಯೂ ಚುನಾವಣಾ ಹಬ್ಬದ ಮೆರಗನ್ನು ಹೆಚ್ಚಿಸಲು ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.
ಈ ಬಾರಿ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಫ್ಲಾಶ್ ಮಾಬ್, ರ್‍ಯಾಲಿ ಸೇರಿದಂತೆ ಮಾಲ್, ಅಪಾರ್ಟ್ಮೆಂಟ್ ಹೀಗೆ ನಗರದಾಧ್ಯಂತ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿ ನಗರ ಪ್ರದೇಶದ ಮತದಾರರು ಹಾಗೂ ಯುವಜನರನ್ನು ಸೆಳೆಯಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಕೆ ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಎನ್ ಎನ್ ಮಧು ಮತ್ತಿತರರು ಭಾಗವಹಿಸಿದ್ದರು.