Fri. Nov 1st, 2024

ಸುತ್ತೂರು ಮಠ ರಾಜ್ಯಕ್ಕೆ ಮಾದರಿ:ಸಿಎಂ ಬಣ್ಣನೆ

Share this with Friends

ಮೈಸೂರು, ಫೆ.8: ಇತ್ತೀಚೆಗೆ ಜಾತಿ- ಧರ್ಮದ ಹೆಸರಿನಲ್ಲಿ ಗಲಾಟೆಗಳು, ಅಶಾಂತಿ ಸೃಷ್ಟಿಯಾಗುತ್ತಿದೆ,ಧರ್ಮ ಇರುವುದು ನಮಗಾಗಿ, ಧರ್ಮಕ್ಕಾಗಿ ನಾವಿರುವುದಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸುತ್ತೂರು ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ದೇಸಿಯ ಆಟಗಳು ಮತ್ತು ರಂಗೋಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತ್ರೆಯಲ್ಲಿ‌ ಎಲ್ಲಾ ಜಾತಿ, ಧರ್ಮ, ಭಾಷೆಯವರು ಉತ್ಸಾಹದಿಂದ ಭಾಗವಹಿಸಿ ಸೌಹಾರ್ದತೆಯನ್ನು ಕಾಪಾಡುತ್ತಾರೆ,
ಎಲ್ಲಾ ಊರಿನಲ್ಲೂ ಜಾತ್ರೆಗಳು ನಡೆಯುತ್ತವೆ ಆದರೆ ಸುತ್ತೂರು ಜಾತ್ರೆ ಅತ್ಯಂತ ವಿಶೇಷ ಎಂದು ಹೇಳಿದರು.

ಶಿಕ್ಷಣ,ಅರೋಗ್ಯ, ಅನ್ನದಾಸೋಹವನ್ನು ಯಾವುದೇ ಜಾತಿ ಧರ್ಮವನ್ನು ನೋಡದೆ ಲಕ್ಷಾಂತರ ಜನರಿಗೆ ನೀಡುವ ಮೂಲಕ ಸುತ್ತೂರು ಮಠ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೀಗ ಸುತ್ತೂರು ಮಠ ಮತ್ತು ಕರ್ನಾಟಕ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಜಂಟಿಯಾಗಿ ಬಾಸ್ಕೆಟ್ ಬಾಲ್ ಅಕಾಡೆಮಿಯನ್ನು ಪ್ರಾರಂಭಿಸುತ್ತಿರುವುದು ಸುತ್ತೂರು ಮಠದ ಹೆಗ್ಗಳಿಕೆಗೆ ಮತ್ತೊಂದು ಸಾಕ್ಷಿ. ಇಂತಹ ಒಳ್ಳೆಯ ಕಾರ್ಯಗಳಿಗೆ ಸಹಾಯ ಮಾಡಲು ನಮ್ಮ ಸರ್ಕಾರ ಸಿದ್ಧ ಎಂದು ಭರವಸೆ ನೀಡಿದರು.

ವಿಶ್ವಗುರು ಬಸವಣ್ಣನವರನ್ನು ನಮ್ಮ ಸರ್ಕಾರ ಸಾಂಸ್ಕೃತಿಕ ನಾಯಕ, ವಿಶ್ವ ನಾಯಕ ಎಂದು ಗುರುತಿಸಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಅವರ ಭಾವ ಚಿತ್ರದ ಮೇಲೆ ಬರೆಸಿ ಇರಿಸಲಾಗುವುದು ಎಂದು ಇದೇ ವೇಳೆ ಸಿಎಂ ತಿಳಿಸಿದರು.

ಜ್ಞಾನ ಯಾರ ಮನೆ ಸ್ವತ್ತಲ್ಲ ಅದನ್ನು ಎಲ್ಲರೂ ವೃದ್ಧಿಸಿಕೊಳ್ಳಬೇಕು. ಹಾಗಾಗಿ ಶಿಕ್ಷಣ ಎಲ್ಲರಿಗೂ ಮುಖ್ಯ. ಯಾವ ಜಾತಿಯಲ್ಲಿ ಹುಟ್ಟಿದ್ದೇವೆ ಎಂಬುದರ ಮೇಲೆ ಶ್ರೇಷ್ಠತೆ ಬರುವುದಿಲ್ಲ ಒಳ್ಳೆಯ ಮನುಷ್ಯರಾಗಿ ಬದುಕಿದಾಗ ಶ್ರೇಷ್ಠತೆ ಬರುತ್ತದೆ.

ದೇಶದ ಸಂಪತ್ತು ಹಾಗೂ ಅಧಿಕಾರ ಕೆಲವೇ ಜನರ ಕೈಯಲ್ಲಿ ಇರಬಾರದು ಅದು ಎಲ್ಲರಿಗೂ ಹಂಚಿಕೆಯಗಬೇಕು,ಹಾಗಾದಾಗ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಎಲ್ಲರಿಗೂ ಶಿಕ್ಷಣ ಸಿಗಬೇಕು.
ನಾನು ಮುಖ್ಯಮಂತ್ರಿ ಯಾಗಲು ಸಂವಿಧಾನ ಮತ್ತು ಶಿಕ್ಷಣ ಕಾರಣ, ಇದು ನಮ್ಮೆಲ್ಲರನ್ನೂ ಕಾಯುತ್ತದೆ ಎಂದು ಹೇಳಿದರು.

ಗೃಹ ಸಚಿವರ ಜಿ.ಪರಮೇಶ್ವರ್ ಮಾತನಾಡಿ, ಶ್ರೀ ಸುತ್ತೂರು ಮಠ ಸಮಾಜದ ಧಾರ್ಮಿಕ ಕ್ಷೇತ್ರದಲ್ಲಿ ಅದರಲ್ಲೂ ಶಿಕ್ಷಣ ಮತ್ತು ಅರೋಗ್ಯ ಕ್ಷೇತ್ರದಲ್ಲಿ ಇಡೀ ದೇಶಕ್ಕೇ ಮಾದರಿಯಾಗುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಲಕ್ಷಾಂತರ ಭಾರತೀಯರು ಜೆ. ಎಸ್. ಎಸ್ ವಿದ್ಯಾಲಯದಲ್ಲಿ ಓದಿ ಇಂದು ಪ್ರಪಂಚದಾದ್ಯಂತ ಇಂಜಿನಿಯರ್, ಡಾಕ್ಟರು ಗಳಾಗಿ ಸಾವಿರಾರು ಜನರು ಕಾರ್ಯನಿರ್ವಹಿಸುತ್ತಿದ್ದಾರೆ ಇದು ಸುತ್ತೂರು ಮಠ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ ಎಂದು ‌ಬಣ್ಣಿಸಿದರು.

ದೇಸಿಯ ಆಟಗಳನ್ನು ಆಯೋಜನೆ ಮಾಡುವ ಮೂಲಕ ಹಿಂದಿನ ಇತಿಹಾಸಕ್ಕೆ ಕರೆದುಕೊಂಡು ಹೋಗಿದ್ದಾರೆ,ದೇಸಿಯ ಆಟಗಳು ಉಳಿಯಬೇಕು, ಹಿರಿಯರು ಬಿಟ್ಟು ಹೋದ ಆದರ್ಶಗಳನ್ನು ಅನುಸರಿಸಬೇಕು ಎಂದು ಪರಮೇಶ್ವರ್ ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರ ಹೆಚ್. ಸಿ ಮಹಾದೇವಪ್ಪನವರು ಮಾತನಾಡಿ, ಸುತ್ತೂರು ಮಠದಿಂದ ಎಂದಿನಂತೆ ಎಲ್ಲಾ ಜನರು ಮತ್ತು ಜನಾಂಗದವರನ್ನು ಸೇರಿಸುವ ಕೆಲಸ ಮುಂದುವರೆದಿದೆ, ನಮ್ಮ ರಾಜ್ಯ ಮಾತ್ರವಲ್ಲದೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್, ಪಶು ಸಂಗೋಪನೆ ಇಲಾಖೆ ಸಚಿವ ವೆಂಕಟೇಶ್, ಉನ್ನತ ಶಿಕ್ಷಣ ಸಚಿವ ಸುಧಾಕರ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಸುತ್ತೂರು ಶ್ರೀ ‌ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.


Share this with Friends

Related Post