ಬೆಂಗಳೂರು,ಏ.10- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ರ್ಪಸಿರುವ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರಿಗೆ ಆಮ್ಆದ್ಮಿ ಪಕ್ಷ ಬೆಂಬಲ ವ್ಯಕ್ತಪಡಿಸಿದೆ.ಸಾರಿಗೆ ಸಚಿವರೂ ಆಗಿರುವ ಸೌಮ್ಯರೆಡ್ಡಿ ಅವರ ತಂದೆ ರಾಮಲಿಂಗಾರೆಡ್ಡಿ ಅವರನ್ನು ಆಮ್ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ.ಸತೀಶ್ ಕುಮಾರ್ ನೇತೃತ್ವದಲ್ಲಿ ಇಂಡಿಯಾ ರಾಜಕೀಯ ಒಕ್ಕೂಟದ ಪ್ರಮುಖ ನಾಯಕರು ಭೇಟಿ ಮಾಡಿ ಚುನಾವಣೆಯ ಕುರಿತು ಚರ್ಚೆ ನಡೆಸಿದರು.
ಸೌಮ್ಯರೆಡ್ಡಿ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಮತದಾರರನ್ನು ತಲುಪಲು ಶ್ರಮಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಭಾವಿ ನಾಯಕರು ಈಗಾಗಲೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಹಲವು ಸುತ್ತಿನ ಪ್ರಚಾರದಲ್ಲಿ ತೊಡಗಿಸಿಕೊಂಡು ಸೌಮ್ಯರೆಡ್ಡಿ ಅವರಿಗೆ ಬೆಂಬಲ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಚಿಕ್ಕಪೇಟೆ, ಬಿಟಿಎಂ ಲೇ ಔಟ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಿರಂತರ ಪ್ರವಾಸ ಕೈಗೊಳ್ಳುತ್ತಿರುವ ಸೌಮ್ಯರೆಡ್ಡಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಷಡ್ಯಂತರ ಮಾಡಿ ನನ್ನನ್ನು ಸೋಲಿಸಲಾಯಿತು. ಈ ಕುರಿತು ಜನರಿಗೆ ಮಾಹಿತಿ ಇದ್ದು, ಲೋಕಸಭಾ ಚುನಾವಣೆಯಲ್ಲಿ ತಮಗೆ ವ್ಯಾಪಕ ಬೆಂಬಲ ನೀಡುತ್ತಿದ್ದಾರೆ. ರಾಜಕೀಯದ ಜೊತೆಗೆ ತಾವು ಮಾನವ ಹಕ್ಕುಗಳ ರಕ್ಷಣೆ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ಹೋರಾಟ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಶಾಸಕಿಯಾಗಿ ಉತ್ತಮ ಕೆಲಸಗಳನ್ನು ನಿರ್ವಹಿಸಿದ್ದೇನೆ. ಲೋಕಸಭಾ ಕ್ಷೇತ್ರದಲ್ಲಿ ಜನಸಮಾನ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.