Wed. Jan 1st, 2025

ಕೇಂದ್ರದ ಮೇಲೆ ಗೂಬೆ ಕೂರಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ: ಕಾಂಗ್ರೆಸ್ ವಿರುದ್ಧ ಬಿಎಸ್ ವೈ ಕಿಡಿ

Share this with Friends

ಬೆಂಗಳೂರು,ಏ.11: ರಾಹುಲ್ ನಾಯಕತ್ವದಲ್ಲಿ ವಿಶ್ವಾಸ ಇಲ್ಲ ಅದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಕಿಡಿಕಾರಿದರು.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೊಡುವ ಒಂದೊಂದು ಮತವೂ ಆರ್ಥಿಕ ದಿವಾಳಿತನ, ಭ್ರಷ್ಟಾಚಾರ, ದೇಶದ ಅಭದ್ರತೆಗೆ ಕೊಡುವ ಮತ ಆಗುತ್ತದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ನಡೆಯುತ್ತಿದೆ ಅನ್ನೋದನ್ನೆ ಕಾಂಗ್ರೆಸ್ ನಾಯಕರು ಮರೆತುಹೋಗಿದ್ದಾರೆ ಅನ್ನಿಸ್ತಿದೆ. ರಾಹುಲ್ ನಾಯಕತ್ವ ವಿಫಲವಾಗಿದೆ ಹಾಗಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ಆದರೆ ನಾವು ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಸರ್ಕಾರ ಕಳೆದ 10 ತಿಂಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ ಹೇಳಲಿ ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ಎಕ್ಸ್ ಖಾತೆಯಲ್ಲಿ ಮಾತ್ರ ಉದ್ಯೋಗ ಸೃಷ್ಟಿ ಆಗ್ತಿದೆ ಅಷ್ಟೇ. ಒಂದೇ ಒಂದು ಉದ್ಯೋಗ ಕೊಟ್ಟಿಲ್ಲ ಎಂದು ಎಂದು ಬಿ ಎಸ್ ವೈ ತರಾಟೆಗೆ ತೆಗೆದುಕೊಂಡರು.

ಮೋದಿ ಅವರಿಗೆ 2 ಕೋಟಿ ಉದ್ಯೋಗ ಎಲ್ಲಿ ಎಂದು ಕೇಳ್ತಿದ್ದಾರೆ, ದೇಶದಲ್ಲಿ 7 ಕೋಟಿ ಹೊಸ ಉದ್ಯೋಗ ಭವಿಷ್ಯ ನಿಧಿ ಅಡಿ ಸೃಷ್ಟಿ ಆಗಿದೆ. ಹೆಚ್‌ಎಎಲ್ ಮುಚ್ಚಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಅಲ್ಲಿ 84,000 ಕೋಟಿ ಕೆಲಸ ಆಗಿದೆ. ಈಗ 54,000 ಕೋಟಿ ರೂ. ವೆಚ್ಚದ ಕೆಲಸ ಅಲ್ಲಿ ನಡೆಯುತ್ತಿದೆ. ಈಗ ರಾಹುಲ್ ಗಾಂಧಿ ಕ್ಷಮೆ ಕೇಳ್ತಾರಾ ಅಥವಾ ಡಿಕೆಶಿ ಅವರಿಂದ ಕ್ಷಮೆ ಕೇಳಿಸುತ್ತಾರಾ ಎಂದು ಪ್ರಶ್ನಿಸಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರದಿಂದ ಕೊಡಬೇಕಿರುವ ಹಣ ರೈತರಿಗೆ ಕೊಟ್ಟಿಲ್ಲ. ಇದು ದಿವಾಳಿಯಾದ ಸರ್ಕಾರ ಎಂದು ಕಟುವಾಗಿ ನುಡಿದರು.

ಒಕ್ಕಲಿಗ ಸಿಎಂ ತೆಗೆದವರು ಯಾರೆಂದು ಸ್ವಾಮೀಜಿಯವರ ಹತ್ತಿರ ಹೋಗಿ ಅವರೇ ಕೇಳಲಿ, ಅವರೇ ಹೇಳಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಯಡಿಯೂರಪ್ಪ ಟಾಂಗ್ ನೀಡಿದರು.

ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Share this with Friends

Related Post