Wed. Jan 1st, 2025

ಅಂಬೇಡ್ಕರ್ ರನ್ನು ಸೋಲಿಸಿದ್ದೇ ಕಾಂಗ್ರೆಸ್‌: ಅಶೋಕ್ ಟೀಕೆ

Share this with Friends

ಕೋಲಾರ, ಏ.12: ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಕುರಿತು ಈಗ ಮಾತನಾಡುವ ಕಾಂಗ್ರೆಸ್‌ ನಾಯಕರು, ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದರು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು.

ಬಂಗಾರಪೇಟೆ ಕ್ಷೇತ್ರದ ಅಂಚಾಳ ಗ್ರಾಮದಲ್ಲಿ ನಡೆದ ಪ್ರಚಾರಸಭೆ ವೇಳೆ ಮಾತನಾಡಿದ‌ ಅವರು,ನರೇಂದ್ರ ಮೋದಿ ಪ್ರಧಾನಿಯಾದ ನಂತರ ಡಾ.ಬಿ.ಆರ್‌.ಅಂಬೇಡ್ಕರ್‌ ಬರೆದ ಸಂವಿಧಾನಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ ಎಂದು ತಿಳಿಸಿದರು.

ಅಂಬೇಡ್ಕರ್‌ ಅವರು ತುಳಿತಕ್ಕೊಳಗಾದ ಜನರ ಪರವಾಗಿ ದನಿ ಎತ್ತಿದ್ದರು. ಅಂತಹ ಮಹಾನ್‌ ವ್ಯಕ್ತಿ ಬಾಬಾ ಸಾಹೇಬ್‌ ಅಂಬೇಡ್ಕರರು ಲೋಕಸಭೆಗೆ ಹೋಗಲು ಚುನಾವಣೆಗೆ ನಿಂತಾಗ ಅವರನ್ನು ಕಾಂಗ್ರೆಸ್‌ ಹೀನಾಯವಾಗಿ ಸೋಲಿಸಿತ್ತು.

ಅಂದಿನ ಪ್ರಧಾನಿ ನೆಹರೂ ಅಂಬೇಡ್ಕರರನ್ನು ಸೋಲಿಸುವಂತೆ ಕರೆ ನೀಡಿದ್ದರು, ಈ ಇತಿಹಾಸವನ್ನು ಎಲ್ಲರೂ ತಿಳಿದಿರಬೇಕು. ಇಷ್ಟೇ ಅಲ್ಲದೆ ಸೋಲಿಸಿದವರಿಗೆ ಕಾಂಗ್ರೆಸ್‌ ಪ್ರಶಸ್ತಿ ನೀಡಿ ಗೌರವಿಸಿತ್ತು ಅಂಬೇಡ್ಕರರಿಗೆ ಭಾರತರತ್ನ ನೀಡಬೇಕೆಂದು ಕಾಂಗ್ರೆಸ್‌ನ ಒಬ್ಬ ನಾಯಕ ಆಗ್ರಹ ಮಾಡಲಿಲ್ಲ,
ಆದರೆ ಆ ಕೆಲಸವನ್ನು ಅಟಲ್‌ ಬಿಹಾರಿ ವಾಜಪೇಯಿ ಮಾಡಿದ್ದರು ಎಂದು ಹೇಳಿದರು.

ಅಂಬೇಡ್ಕರರು ತೀರಿಕೊಂಡಾಗ ಸ್ಮಾರಕ ನಿರ್ಮಿಸಲು ಕೂಡ ಕಾಂಗ್ರೆಸ್‌ ಜಾಗ ಕೊಡಲಿಲ್ಲ. ಇಷ್ಟೆಲ್ಲ ಅನ್ಯಾಯ ಮಾಡಿದ ಕಾಂಗ್ರೆಸ್‌ಗೆ ದಲಿತರು ಮತ ನೀಡಬೇಕೆ ಎಂದು ಆಲೋಚಿಸಬೇಕು ಎಂದು ಸಲಹೆ ನೀಡಿದರು ಅಶೋಕ್.

ದೇಶ ಸುಭದ್ರತೆಯಿಂದ ಇದ್ದರೆ ಮಾತ್ರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ. ಪಾಕಿಸ್ತಾನ ಅನೇಕ ಬಾರಿ ದೇಶದ ಮೇಲೆ ದಾಳಿ ಮಾಡಿದೆ. ಇತ್ತೀಚೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್‌ನವರೇ ಕರೆದುಕೊಂಡು ಬಂದವರು ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದರು. ಇಂತಹವರಿಗೆ ಶಿಕ್ಷೆ ನೀಡದೆ ಕಾಂಗ್ರೆಸ್‌ ಸರ್ಕಾರ ಸುಮ್ಮನಿದೆ.

ಸಿಎಂ ಸಿದ್ದರಾಮಯ್ಯನವರು ಆಗಾಗ್ಗೆ ಅನ್ನಭಾಗ್ಯ ಎಂದು ಹೇಳುತ್ತಾರೆ. ಆದರೆ ಅದು ನಿಜವಾಗಿಯೂ ಮೋದಿ ಭಾಗ್ಯವಾಗಿದೆ. ಇವರದ್ದು ಕನ್ನ ಭಾಗ್ಯ ಎಂದು ಗೇಲಿ ಮಾಡಿದರು.

ಮೈತ್ರಿ ಅಭ್ಯರ್ಥಿ ಮಲ್ಲೇಶ್‌ ಬಾಬು ಅವರ ತಂದೆ ಐಎಎಸ್‌ ಅಧಿಕಾರಿಯಾಗಿ ದಲಿತರಿಗೆ ಸಹಾಯ ಮಾಡಿದ್ದಾರೆ. ವಿದ್ಯಾವಂತ ಯುವಕ ಮಲ್ಲೇಶ್‌ ಅವರಿಗೆ ಎಲ್ಲರೂ ಬೆಂಬಲಿಸಬೇಕು ಎಂದು ಇದೇ ವೇಳೆ ಅಶೋಕ್ ಮನವಿ ಮಾಡಿದರು.


Share this with Friends

Related Post