Sat. Nov 2nd, 2024

ಮುನಿಸು ಮರೆತು ಶ್ರೀನಿವಾಸ ಪ್ರಸಾದ್ ಮನೆಗೆ ಸಿಎಂ:ರಾಜಕೀಯ ಚರ್ಚೆ ಇಲ್ಲ ಎಂದ ಸಿದ್ದು

Share this with Friends

ಮೈಸೂರು,ಏ.13: ಸಂಸದ ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ನಾನು ಯಾವುದೇ ರಾಜಕೀಯ ವಿಷಯವನ್ನು ಪ್ರಸ್ತಾಪ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ‌ಜಯಲಕ್ಷ್ಮಿ ಪುರಂ ನಲ್ಲಿರುವ ಶ್ರೀ‌ನಿವಾಸ ಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ‌ ಸಿಎಂ,
ಮಾಧ್ಯಮದವರೊಂದಿಗೆ ಮಾತನಾಡಿದರು.

ಶ್ರೀನಿವಾಸ‌ ಪ್ರಸಾದ್ ಮತ್ತು ನಾನು ಬಹಳ ದೀರ್ಘಕಾಲದ ಸ್ನೇಹಿತರಾಗಿದ್ದವರು,ಆಪ್ತರಾಗಿದ್ದವರು,ಅವರ‌ ಆರೋಗ್ಯ ವಿಚಾರಿಸಲೆಂದು ಭೇಟಿ ಮಾಡಿದ್ದೇನೆ ಯಾವುದೇ ರಾಜಕೀಯ ವಿಷಯ ಮಾತನಾಡಿಲ್ಲ ಎಂದು ಹೇಳಿದರು.

ಶ್ರೀನಿವಾಸ ಪ್ರಸಾದ್ ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದೇನೆ ಎಂದು ಘೋಷಿಸಿದ್ದಾರೆ.ಯಾವುದೇ ರಾಜಕೀಯ ಪಕ್ಷಕ್ಕೂ ಬೆಂಬಲವಿಲ್ಲ ತಟಸ್ಥ ವಾಗಿರುವುದಾಗಿ ಹೇಳಿದ್ದಾರೆ ಹಾಗಾಗಿ ನಾನು ರಾಜಕೀಯ ಮಾತನಾಡಲಿಲ್ಲಾ,ಆದರೆ ನಮ್ಮ ಪಕ್ಷದ ಬಗ್ಗೆ ಸಿಂಪತಿ ಇರಲಿ ಎಂದು ಮನವಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಲೋಕಸಭಾ ಚುನಾವಣೆ ಹೊತ್ತಲ್ಲಿ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿರುವಂತೆ ಕಾಣುತ್ತಿದೆ. ರಾಜಕೀಯ ಕಾರಣಕ್ಕೆ 6 ವರ್ಷಗಳಿಂದ ಇದ್ದ ಮುನಿಸನ್ನು ಮರೆತು ವಿ.ಶ್ರೀನಿವಾಸ್‌ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ನಾಳೆ (ಭಾನುವಾರ) ಪ್ರಧಾನಿ ಮೋದಿ ಅವರು ಮೈಸೂರಿಗೆ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಈ ಹೊತ್ತಿನಲ್ಲೇ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಸಿಎಂ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ.

ಆರು ವರ್ಷಗಳಿಂದ ದಿಗ್ಗಜ ನಾಯಕರು ಪರಸ್ಪರ ಭೇಟಿಯಾಗಿರಲಿಲ್ಲ. ಮಾತುಕತೆಯೂ ಇರಲಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ಪ್ರಸಾದ್ ಮನೆಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.


Share this with Friends

Related Post