ನವದೆಹಲಿ,ಏ.15: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ನಲ್ಲೂ ಜಾಮೀನು ದೊರೆಯದ ಕಾರಣ ಇನ್ನು ಕೆಲ ದಿನಗಳ ಕಾಲ ತಿಹಾರ್ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.
ಅಬಕಾರಿ ನೀತಿ ಹಗರಣದಿಂದ ಉಂಟಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಮನವಿಯ ಅರ್ಜಿ ವಿಚಾರಣೆಯನ್ನು ಏ.29ರ ನಂತರ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಕೇಜ್ರಿವಾಲ್ ಏ.29ರವರೆಗೆ ಜೈಲಿನಲ್ಲೇ ಇರಬೇಕಾಗಿದೆ.
ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಈ ಕುರಿತಂತೆ ಜಾರಿ ನಿರ್ದೇಶನಾಲಯದಿಂದ ಪ್ರತಿಕ್ರಿಯೆ ಕೇಳಿದೆ.
ಕೇಜ್ರಿವಾಲ್ ಅವರ ಬಂಧನವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಇಡಿ ಗೆ ನೋಟಿಸ್ ಜಾರಿ ಮಾಡಿ, ಏಪ್ರಿಲ್ 24 ರೊಳಗೆ ಅರ್ಜಿಗೆ ಉತ್ತರಿಸುವಂತೆ ಸೂಚಿಸಿದೆ.
ಜತೆಗೆ ಏಪ್ರಿಲ್ 29 ರಿಂದ ಪ್ರಾರಂಭವಾಗುವ ವಾರದಲ್ಲಿ ಈ ವಿಷಯದ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.
ಇಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಿಹಾರ್ ಜೈಲಿಗೆ ಭೇಟಿ ನೀಡಿ ಅರವಿಂದ್ ಕೇಜರಿವಾಲ್ ಅವರನ್ನು ಭೇಟಿಯಾದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್,ನಮ್ಮ ಆಪ್ ಮುಖ್ಯಸ್ಥರು, ದೆಹಲಿ ಮುಖ್ಯಮಂತ್ರಿಯೂ ಆದ ಅರವಿಂದ ಕೇಜ್ರಿವಾಲ್ ಅವರನ್ನು ಒಬ್ಬ ಟೆರರಿಸ್ಟ್ ನಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ಬಿಜೆಪಿ ಇದಕ್ಕೆ ಸರಿಯಾದ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.