ಬೆಂಗಳೂರು,ಏ.15: ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಹಾಗೂ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ಅಖಿಲ ಭಾರತ ಕಾರ್ಮಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷೆ ಆರ್.ಗಿರಿಜಮ್ಮ ಹಾಗೂ ಮತ್ತಿತರೆ ಮಹಿಳೆಯರು ಕಾಂಗ್ರೆಸ್ ನಾಯಕರ ವಿರುದ್ಧ ದೂರು ಕೊಟ್ಟಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟಿ, ಬಿಜೆಪಿ ಸಂಸದರಾದ ಹೇಮಾ ಮಾಲಿನಿ ಅವರ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲ ಹಾಗೂ ಮಹಿಳೆಯರು ಅಡುಗೆ ಮಾಡುವುದಕ್ಕೆ ಲಾಯಕ್ಕು ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಮುನ್ನಡೆಸಿದ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಸಮಾಜದಲ್ಲಿ ಅತ್ಯಂತ ಗೌರವ, ಸದ್ಬಾವನೆಯಿಂದ ಗೌರವಿಸಲ್ಪಡುವ ಮಹಿಳೆಯರ ಬಗ್ಗೆ ಅಪಮಾನ ಮಾಡಿರುತ್ತಾರೆ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಗಳನ್ನು ಕೊಟ್ಟಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆರ್.ಗಿರಿಜಮ್ಮ ಹಾಗೂ ಮತ್ತಿತರೆ ಮಹಿಳೆಯರು ಮಹಿಳಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಂಸದರು, ಪ್ರಖ್ಯಾತ ನಟಿಯೂ ಆಗಿರುವ ಹೇಮಾಮಾಲಿನಿ ಅವರ ಬಗ್ಗೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಂದೀಪ್ ಸುರ್ಜೇವಾಲ ಅತ್ಯಂತ ಕೆಟ್ಟದಾಗಿ ತೇಜೋವಧೆ ಮಾಡಿ ಅವರ ವೈಯಕ್ತಿಕ ಚಾರಿತ್ರ್ಯಹರಣ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ತ್ರೀಯರು ಅಡುಗೆ ಮಾಡುವುದಕ್ಕೆ ಲಾಯಕ್ಕು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕರ ಸ್ತ್ರೀದ್ವೇಷಿ ಮನೋಭಾವವನ್ನು ತೋರಿಸುತ್ತದೆ. ಆಕೆಗೆ ಮಾತನಾಡಲು ಬರುವುದಿಲ್ಲ. ಆಕೆ ಮನೆಯಲ್ಲಿ ಇರಲು ಲಾಯಕ್ಕು ಎಂದು ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯ ಬಿಜೆಪಿ ಅಭ್ಯರ್ಥಿಯನ್ನು ಗುರಿಯಾಗಿಸಿ ಹೇಳಿರುವುದು ಅಕ್ಷಮ್ಯ ಹಾಗೂ ಸಂವಿಧಾನಕ್ಕೆ ಎಸಗಿದ ಅಪಚಾರ ಎಂದು ದೂರಿನಲ್ಲಿ ಮಹಿಳೆಯರು ತಿಳಿಸಿದ್ದಾರೆ.