ಕಳಚಿದ ಮತ್ತೊಂದು ಕೊಂಡಿ:
ಹಿರಿಯ ಖ್ಯತ ನಟ ದ್ವಾರಕೀಶ್ ನಿಧ
ಬೆಂಗಳೂರು, ಏ.16: ಕನ್ನಡದ ಖ್ಯಾತ ಹಿರಿಯ ನಟ ದ್ವಾರಕೀಶ್ ನಿಧನರಾಗಿದ್ದು ಕನ್ನಡಚಿತ್ರ ರಂಗದ ಮತ್ತೊಂದು ಕೊಂಡಿ ಕಳಚಿದಂತಾಗಿದೆ.
ಅವರಿಗೆ 81ವರ್ಷಗಳಾಗಿತ್ತು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಟರಾಗಿ, ನಿರ್ಮಾಪಕರಾಗಿ ಹಲವಾರು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಪ್ರಸಿದ್ದರಾಗಿದ್ದರು.
ಬೆಳಗ್ಗೆ ದ್ವಾರಕೀಶ್ ನಿಧನರಾಗಿರುವ ಸುದ್ದಿಯನ್ನು ಅವರ ಪುತ್ರ ಯೋಗೀಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಜೋಡಿ ಸಿನಿಪ್ರೇಮಿಗಳ ಮನಸೂರೆಗೊಂಡಿದ್ದರು.ಬೇರೆ ದೇಶದಿಂದ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವಲ್ಲೂ ದ್ವಾರಕೀಶ್ ಎತ್ತಿದ ಕೈ.
ಸಿಂಗಾಪುರದಲ್ಲಿ ರಾಜಾಕುಳ್ಳ,ಕಳ್ಳಕುಳ್ಳ,ಕಿಲಾಡಿ ಜೋಡಿ ಸೇರಿದಂತೆ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.
ದ್ವಾರಕೀಶ್ ಕೇವಲ ನಟರಷ್ಟೇ ಅಲ್ಲಾ ನಿರ್ಮಾಪಕರೂ,ನಿರ್ದೇಶಕರಾಗಿಯೂ ಹೆಸರು ಮಾಡಿದ್ದರು.ಅವರ ನಿರ್ದೇಶನದ ಬಹಳಷ್ಟು ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿದ್ದವು.
ಹಾಸ್ಯ ನಟನಾಗಿ ಜನಮನ ಸೂರೆಗೊಂಡಿದ್ದ ಕನ್ನಡದ ಕುಳ್ಳ ಖ್ಯಾತಿಯ ದ್ವಾರಕೀಶ್, ನಾಯಕ ನಟನಾಗಿಯೂ ಗಮನ ಸೆಳೆದಿದ್ದರು.
ಕನ್ನಡ ನಟ ದ್ವಾರಕೀಶ್ ಅವರು 1942ರ ಆಗಸ್ಟ್ 19ರಂದು ಜನಿಸಿದರು. ಮೈಸೂರಿನ ಶಾರದಾ ವಿಲಾಸ್ ಮತ್ತು ಬಾನುಮಯ್ಯ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ಶಿಕ್ಷಣ ಪೂರ್ಣಗೊಂಡ ಬಳಿಕ ಇವರ ಸಹೋದರ ವಾಹನ ಬಿಡಿಭಾಗಗಳ ಬಿಸ್ನೆಸ್ ಆರಂಭಿಸಿದರು. ಭಾರತ್ ಆಟೋ ಸ್ಪೇರ್ ಹೆಸರಿನ ಶಾಪ್ ಅನ್ನು ಮೈಸೂರಿನಲ್ಲಿ ತೆರೆದಿದ್ದರು. ನಂತರ ಮಾವ ಹುಣಸೂರು ಕೃಷ್ಣಮೂರ್ತಿ ಅವರ ನೆರವಿನಿಂದ ದ್ವಾರಕೀಶ್ ಸಿನಿಮಾರಂಗ ಪ್ರವೇಶಿಸಿದರು.
1985ರಲ್ಲಿ ದ್ವಾರಕೀಶ್ ಸಿನಿಮಾ ನಿರ್ದೇಶನ ಆರಂಭಿಸಿದರು. ನೀ ಬರೆದ ಕಾದಂಬರಿ ಇವರು ನಿರ್ದೇಶನದ ಮೊದಲ ಸಿನಿಮಾ. ಇತರೆ ನಿರ್ಮಾಪಕರ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಲು ಆರಂಭಿಸಿದರು. ಡ್ಯಾನ್ಸ್ ರಾಜಾ ಡ್ಯಾನ್ಸ್, ನೀ ಬರೆದ ಕಾದಂಬರಿ, ಶೃತಿ, ಶೃತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ, ಕಿಲಾಡಿಗಳು ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ನೀಡಿದ್ದಾರೆ.
ನಟ ದ್ವಾರಕೀಶ್ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ತೀವ್ರ ದುಃಖ ವ್ಯಕ್ತಪಡಿಸಿದೆ.ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.