ಮೈಸೂರು, ಏ.17: ಶ್ರೀ ರಾಮನವಮಿ ಪ್ರಯುಕ್ತ ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಪ್ರಭು ಶ್ರೀರಾಮಚಂದ್ರನಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.
ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ಇಂದಿನಿಂದ ಏ.24ರ ವರೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಮುಂಜಾನೆ ಶ್ರೀರಾಮ ಸೀತಾಮಾತಾ,ಲಕ್ಷ್ಮಣ, ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ ಸುಗಂಧಪುಷ್ಪ ಅಲಂಕಾರಗಳನ್ನು ಮಾಡಲಾಗಿತ್ತು.
ಶ್ರೀರಾಮಚಂದ್ರ ಜನಿಸಿದ್ದು ಮಧ್ಯಾಹ್ನ 12 ಗಂಟೆ ನಂತರ ಹಾಗಾಗಿ ದೇವಾಲಯಗಳಲ್ಲಿ 12 ಗಂಟೆಯ ನಂತರ ಭಕ್ತಾದಿಗಳಿಗೆ ಪಾನಕ ಮಜ್ಜಿಗೆ ಕೋಸಂಬರಿ ಮತ್ತು ಇತರ ಪ್ರಸಾದವನ್ನು ವಿನಿಯೋಗ ಮಾಡಲಾಯಿತು.
ಇಂದು ಸಂಜೆ 7 ಗಂಟೆ ಯಿಂದ ಸ್ಥಳೀಯ ಮಕ್ಕಳಿಂದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಲವಾರು ಭಕ್ತರು ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಅರ್ಚನೆ ಮಾಡಿಸಿ ಮಂಗಳಾರತಿ ಪಡೆದು ಪ್ರಸಾದ ಸ್ವೀಕರಿಸಿದರು.
ಇಡೀ ದೇವಾಲಯವನ್ನು ತಳಿರು ತೋರಣ ಬಗೆ, ಬಗೆಯ ಹೂಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು ಎಲ್ಲರ ಮನಸೂರೆಗೊಂಡಿತು.