ಚಾಮರಾಜನಗರ, ಏ.18: ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದವು.
ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವಿನೂತನವಾಗಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲರ ಗಮನ ಸೆಳೆದವು
ಜಿಲ್ಲಾಡಳಿತ ಭವನದ ಪ್ರವೇಶದ್ವಾರದಲ್ಲಿ ಆಕರ್ಷಕವಾಗಿ ಚಿತ್ರಿಸಿದ್ದ ಭಾರತ ಚುನಾವಣಾ ಆಯೋಗದ ಲಾಂಛನ, ಭಾರತದ ನಕ್ಷೆ ಚಿತ್ರಣದ ಬಳಿ ಮೆಟ್ಟಿಲುಗಳಲ್ಲಿ ಸಾಲಾಗಿ ಇರಿಸಿದ್ದ ದೀಪಗಳನ್ನು ಹಚ್ಚುವ ಮೂಲಕ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ದೀಪನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಸ್ವೀಪ್ ಯುವ ರಾಯಬಾರಿ ದೀಪಾ ಬುದ್ದೆ, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪಿ. ಲಕ್ಷ್ಮೀ ಅವರು ಜಿಲ್ಲಾಡಳಿತ ಭವನದಿಂದ ಆಡಳಿತ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಮುಖ್ಯರಸ್ತೆವರೆಗೆ ಪಂಜಿನ ಮೆರವಣಿಗೆ ನಡೆಸಿದರು.
ಪಂಜಿನ ಮೆರವಣಿಗೆಯಲ್ಲಿ ಚುನಾವಣಾ ಘೋಷವಾಕ್ಯಗಳಾದ ಚುನಾವಣಾ ಪರ್ವ-ದೇಶದ ಗರ್ವ, ಮತದಾನ ನಮ್ಮ ಹಕ್ಕು, ಎಲ್ಲರೂ ನೈತಿಕ ಮತದಾನ ಬೆಂಬಲಿಸಿ ಹೀಗೆ ಘೋಷವಾಕ್ಯಗಳನ್ನು ಮೊಳಗಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇದೇ ತಿಂಗಳ 26ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ,
ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಹತ್ತು-ಹಲವಾರು ಮತದಾನ ಜಾಗೃತಿ (ಸ್ವೀಪ್) ಚಟುವಟಿಕೆಗಳನ್ನು ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಆಯೋಜಿಸಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮನವಿ ಮಾಡಿದರು.
ನಂತರ ಜಿಲ್ಲಾಡಳಿತ ಭವನದ ಒಳಾವರಣದಲ್ಲಿ ಚುನಾವಣಾ ಜಾಗೃತಿ ಮೂಡಿಸುವ ವಿವಿಧ ಬಗೆಯ ಬಣ್ಣಬಣ್ಣದ ಅಕರ್ಷಕ ರಂಗೋಲಿ ಚಿತ್ರಗಳು ನೋಡುಗರ ಮನೆಸೆಳೆದವು.
ಬಳಿಕ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಿಲ್ಪಾ ನಾಗ್ ಬಹುಮಾನ ವಿತರಿಸಿದರು.