Mon. Dec 23rd, 2024

ಕೆಟಿಪಿಪಿ ಕಾಯ್ದೆ ಗಾಳಿಗೆ ತೂರಿದ BMCRI : ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೋಟೇಷನ್​ ಗೋಲ್ಮಾಲ್​

Share this with Friends

ಬೆಂಗಳೂರು: ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯ ವ್ಯಾಪ್ತಿಗೆ ಬರುವ ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಬಿಎಂಸಿಆರ್​ಐ) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಅನ್ವಯ ಟೆಂಡರ್​ ನಡೆಸುವ ಬದಲು ನಿಯಮಬಾಹಿರವಾಗಿ ಕೋಟೇಷನ್​ (4ಸಿ) ಮೂಲಕ ಹತ್ತಾರು ಕೋಟಿ ರೂ.ಔಷಧ, ಉಪಕರಣ, ರಾಸಾಯನ ಸೇರಿ ಇತರೆ ವಸ್ತುಗಳನ್ನು ಖರೀದಿಸಿರುವುದು ಬಹಿರಂಗವಾಗಿದೆ.

ಬಿಎಂಸಿಆರ್​ಐ ವ್ಯಾಪ್ತಿಯ ವಿಕ್ಟೋರಿಯಾ, ವಾಣಿವಿಲಾಸ್​, ಟ್ರಾಮಾ ಸೆಂಟರ್​, ಪ್ರಧಾನ ಮಂತ್ರಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ, ಇನ್ಸಿಟಿಟ್ಯೂಟ್​ ಆಫ್ ಗ್ಯಾಸ್ಟ್ರೊ ಎಂಟೋರಾಲಜಿ, ಸಂಜಯ ಗಾಂಧಿ ಆಸ್ಪತ್ರೆ, ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯ ವ್ಯಾಪ್ತಿಗೆ ಬರುವ ಬಳ್ಳಾರಿಯ ವಿಮ್ಸ್​, ಮೈಸೂರಿನ ಕೆ.ಆರ್​. ಆಸ್ಪತ್ರೆ, ಬೀದರ್​ ಮೆಡಿಕಲ್​ ಕಾಲೇಜು, ಹುಬ್ಬಳ್ಳಿ ಮೆಡಿಕಲ್​ ಕಾಲೇಜು ಸೇರಿ ಹೊಸದಾಗಿ ಮೆಡಿಕಲ್​ ಕಾಲೇಜುಗಳ ಆಸ್ಪತ್ರೆಗಳಲ್ಲಿ ಕೋಟೋಷನ್​ (4ಸಿ) ದಂಧೆ ಮೂಲಕ ಅಂದಾಜು 13 ಕೋಟಿ ರೂ. ಹಗರಣ ನಡೆಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಅತಿ ಅವಶ್ಯಕತೆ ಇದ್ದಾಗ, ಟೆಂಡರ್​ ಪ್ರಕ್ರಿಯೆ ಸತತ ವಿಳಂಬವಾದರೆ ಕೆಟಿಪಿಪಿ ಕಾಯ್ದೆ ಅಡಿ ಒಂದು ಲಕ್ಷ ರೂ.ಒಳಗಿನ ಉಪಕರಣ, ಔಷಧಗಳನ್ನು ಕೋಟೇಷನ್​ ಮೂಲಕ ಖರೀದಿಸಬಹುದು. ಆದರೆ, ಕೆಟಿಪಿಪಿ ನಿಯಮವನ್ನು ಗಾಳಿಗೆ ತೂರಿ ವೈದ್ಯಕಿಯ ಶಿಕ್ಷಣ ಸಚಿವರ ಹೆಸರು ಹೇಳಿಕೊಂಡು ಕೆಲವರು, ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೋಟೇಷನ್​ ಮೂಲಕ ಅನುಭವ ಇಲ್ಲದ, ಈಗಷ್ಟೇ ಶುರುವಾದ ಕಂಪನಿಗಳಿಗೆ ವರ್ಕ್​ ಅರ್ಡರ್​ ಕೊಟ್ಟು ಜೀವರಕ್ಷಕ ಔಷಧ, ಉಪಕರಣ, ರಾಸಾಯನ ಖರೀದಿಸಲಾಗಿದೆ. ಬಿಎಂಸಿಆರ್​ಐ ಡೀನ್​, ನಿರ್ದೇಶಕ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಈಗಾಗಲೇ ನಿಯಮದಂತೆ ಟೆಂಡರ್​ ಮೂಲಕ ರೇಟ್​ ಕಾಂಟ್ರಕ್ಟರ್​ ಪಡೆದಿರುವವರಿಗೆ ದಬ್ಬಾಳಿಕೆ ನಡೆಸುವ ಆಯಾ ಆಸ್ಪತ್ರೆ ನಿರ್ದೇಶಕರು, ಸಚಿವರ ಹೆಸರು ಹೇಳಿ ಅರ್ಹ ಕಂಪನಿಗಳಿಗೆ ಸಿಗಬೇಕಿದ್ದ ವರ್ಕ್​ ಅರ್ಡರ್​ಗಳನ್ನು ಉದ್ದೇಶಪೂರ್ವಕವಾಗಿ ಕಸಿದುಕೊಂಡು ಅರ್ಹತೆ ಇಲ್ಲದ ಮತ್ತು ಅನುಭವ ಇಲ್ಲದಿರುವ ಕಂಪನಿಗಳಿಗೆ ವರ್ಕ್​ ಅರ್ಡರ್​ ನೀಡಲಾಗಿದೆ. ಸಚಿವರ ಹೆಸರು ಹೇಳಿ ಈ ದಂಧೆ ಮಾಡುತ್ತಿರುವವರಿಗೆ ವರ್ಕ್​ ಅರ್ಡರ್​ ಕೊಡಲು ಕೆಲ ಸಿಬ್ಬಂದಿಗೆ ಇಷ್ಟವಿಲ್ಲದಿದ್ದರೂ ಆಸ್ಪತ್ರೆಗಳ ನಿದೇಶಕರು ಇವರ ಮೇಲೆ ಒತ್ತಡ ಹೇರಿ ವರ್ಕ್​ ಅರ್ಡರ್​ ಕೊಡಿಸುತ್ತಿದ್ದಾರೆ. ಅನುಭವ ಇಲ್ಲದ ಕಂಪನಿಗಳಿಂದ ಔಷಧ ಪಡೆದು ಮಕ್ಕಳು ಸೇರಿ ಮಹಿಳಾ ರೋಗಿಗಳಿಗೆ ಸೇವಿಸಿ ಏನಾದರೂ ತೊಂದರೆಯಾದರೆ ಯಾರು ಹೊಣೆ? ಎಂಬ ಆತಂಕವೂ ಕಾಡುತ್ತಿದೆ.

ನಿರ್ದೇಶಕರ ಅಂಧಾದಾರ್ಬಾರ್​:
ಟೆಂಡರ್​ ಮೌಲ್ಯ 5 ಲಕ್ಷ ರೂ. ದಾಟಿದರೆ ಕೆಟಿಪಿಪಿ ಕಾಯ್ದೆಯಂತೆ ಆನ್​ಲೈನ್​ನಲ್ಲಿ ಟೆಂಡರ್​ ಪ್ರಕ್ರಿಯೆ ನಡೆಸಿ ಅತಿ ಕಡಿಮೆ ಮೊತ್ತಕ್ಕೆ ಬಿಡ್​ ಸಲ್ಲಿಸಿದವರಿಗೆ ಕಾರ್ಯಾದೇಶ ಪತ್ರ ನೀಡಬೇಕು. ತುರ್ತು ಪರಿಸ್ಥಿತಿಯಲ್ಲಿ ಅತಿ ಅವಶ್ಯಕತೆ ಇದ್ದಾಗ, ಟೆಂಡರ್​ ಪ್ರಕ್ರಿಯೆ ಸತತ ವಿಳಂಬವಾದರೆ ಕೆಟಿಪಿಪಿ ಕಾಯ್ದೆ ಅಡಿ ಒಂದು ಲಕ್ಷ ರೂ. ಒಳಗಿನ ಉಪಕರಣ, ಔಷಧಗಳನ್ನು ಕೋಟೇಷನ್​ ಮೂಲಕ ಖರೀದಿಸಬಹುದು.

ಆದರೆ, ಬಿಎಂಸಿಆರ್​ಐ ಡೀನ್​ ಮತ್ತು ನಿರ್ದೇಶಕ ಕೆಟಿಪಿಪಿ ಕಾಯ್ದೆ ಅಡಿ 4 (ಸಿ) ವಿನಾಯಿತಿ ದುರ್ಬಳಕೆ ಮಾಡಿಕೊಂಡು ಕೋಟೇಷನ್​ ಮೂಲಕ ಅರ್ಹತೆ ಇಲ್ಲದ ಮತ್ತು ಮಾರುಕಟ್ಟೆಯಲ್ಲಿ ಅನುಭವ ಇಲ್ಲದ ಕಂಪನಿಗಳಿಗೆ ಹತ್ತಾರು ಕೋಟಿ ರೂ.ಮೌಲ್ಯದ ಉಪಕರಣ, ಜೀವರಕ್ಷಕ ಔಷಧ ಮತ್ತು ರಾಸಾಯನ ಖರೀದಿಗಾಗಿ ವರ್ಕ್​ ಅರ್ಡರ್​ ಕೊಟ್ಟಿದ್ದಾರೆ. ಅಕ್ರಮವಾಗಿ ಇವರು 2 ಕಂಪನಿಗಳಿಗೆ ನಡೆಸುತ್ತಿರುವ ಬಗ್ಗೆಯೂ ಆರೋಪಗಳಿವೆ. ಒಂದೊಂದು ಕೋಟೇಷನ್​ನಲ್ಲಿ ನಿಗದಿಗಿಂತ ಹೆಚ್ಚು ಮೊತ್ತ ನಮೂದಿಸಿ ಸರ್ಕಾರದ ಬೊಕ್ಕಸಕ್ಕೂ ಲಕ್ಷಾಂತರ ರೂ. ನಷ್ಟವುಂಟು ಮಾಡಲಾಗಿದೆ. ಕಮಿಷನ್​ ಆಸೆಗಾಗಿ ಕಂಪನಿಗಳ ಜತೆ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ.

ಸಚಿವರ ಹೆಸರು ಹೇಳಿ ದಬ್ಬಾಳಿಕೆ:
ವಿಕ್ಟೋರಿಯಾ, ರಾಜೀವ್​ ಗಾಂಧಿ ಆಸ್ಪತ್ರೆ, ಸಂಜಯಗಾಂಧಿ, ಬೆಂಗಳೂರು ವೈದ್ಯಕಿಯ ಮೆಡಿಕಲ್​ ಕಾಲೇಜು ಸೇರಿ ಆಯಾ ಜಿಲ್ಲೆಗಳಲ್ಲಿರುವ ಮೆಡಿಕಲ್​ ಕಾಲೇಜುಗಳ ನಿರ್ದೇಶಕರಿಗೆ ನೇರವಾಗಿ ಕರೆ ಮಾಡಿ ಸಚಿವರ ಹೆಸರು ಹೇಳುವ ಗ್ಯಾಂಗ್​, ಕೋಟೇಷನ್​ ಮೂಲಕ ತಮಗೆ ಟೆಂಡರ್​ ನೀಡುವಂತೆ ಬೆದರಿಕೆ ಹಾಕುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಗೊಂಡು ಕ್ರಮ ಕೈಗೊಳ್ಳಬೇಕು. ಕೆಲ ವೈದ್ಯಕಿಯ ಕಾಲೇಜುಗಳಲ್ಲಿ ಜಾಗದ ಕೊರತೆ ಇದ್ದರೂ ಉಪಕರಣಗಳನ್ನು ಸರಬರಾಜು ಮಾಡಲಾಗಿದೆ. ಈಗಾಗಲೇ ಸಾಕಷ್ಟು ಸರಬರಾಜು ಮಾಡಿರುವ ಉಪಕರಣಗಳನ್ನು ಅಳವಡಿಸಲು ಕೆಲವೆಡೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಿಸಾಡಲಾಗಿದೆ.

ಸಚಿವರೇ ಎಚ್ಚೆತ್ತುಕೊಳ್ಳಿ:
ಸಚಿವ ಶರಣ್​ ಪ್ರಕಾಶ್​ ಪಾಟೀಲ್​ ಒಳ್ಳೆಯ ಸಚಿವರು. ಅವರ ವಿರುದ್ಧ ಒಂದು ಕಪ್ಪುಚುಕ್ಕೆಯೂ ಇಲ್ಲ. ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಸಿಂಡಿಕೇಟ್​ ವ್ಯವಸ್ಥೆ ಮೂಲಕ ತಂಡ ರಚಿಸಿಕೊಂಡು ಕೋಟೇಷನ್​ ದಂಧೆ ಮಾಡುತ್ತಿರುವ ಕೆಲವರು, ಸಚಿವರ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಸಚಿವರು ಎಚ್ಚೆತ್ತುಗೊಂಡು ಕ್ರಮ ಕೈಗೊಳ್ಳಬೇಕಿದೆ. ನಿರ್ದೇಶನಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಲು ಸಚಿವರು ಮುಂದಾಗಬೇಕು.


Share this with Friends

Related Post