Tue. Nov 5th, 2024

ಪ್ರತಾಪ್ ಸಿಂಹ, ಸದಾನಂದಗೌಡರಿಗೆ ಟಿಕೆಟ್ ತಪ್ಪಿಸಿ ಅನ್ಯಾಯ ಮಾಡಿದ್ದು ಯಾರು: ದೇವೇಗೌಡರಿಗೆ ಸಿಎಂ ಪ್ರಶ್ನೆ

Share this with Friends

ಮಂಡ್ಯ,ಏ.20: ಪ್ರತಾಪ್ ಸಿಂಹ, ಸದಾನಂದಗೌಡರಿಗೆ ಟಿಕೆಟ್ ತಪ್ಪಿಸಿ ಒಕ್ಕಲಿಗರಿಗೆ ಅನ್ಯಾಯ ಮಾಡಿದ್ದು ಯಾರು ದೇವೇಗೌಡರೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಮಂಡ್ಯ ಲೋಕಸಭಾ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪರವಾಗಿ ಕೆಆರ್ ಪೇಟೆಯಲ್ಲಿ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಒಕ್ಕಲಿಗ ಸಮುದಾಯದ ನಾಯಕರಿಗೆ ಅತಿ ಹೆಚ್ಚು ಅನ್ಯಾಯ ಆಗಿರುವುದು ಬಿಜೆಪಿ, ಜೆಡಿಎಸ್ ನಿಂದಲೇ ಎಂದು ದೂರಿದರು.

ಕೆಂಪೇಗೌಡ ಜಯಂತಿ ಆರಂಭಿಸಿದ್ದು ನಾವು, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ನಾವು,ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ನಾವು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮಾಡಿದ್ದೇನು ಹೇಳಿ ಎಂದು ಸಿದ್ದು ಪ್ರಶ್ನಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರ ಗೆಲುವು ಶತಸಿದ್ಧ,ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಒಮ್ಮನಸ್ಸಿನಿಂದ, ಒಟ್ಟಿಗೇ ಕಾಂಗ್ರೆಸ್ ಗೆಲ್ಲಿಸಲು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳು ವರುವುದು ಖಚಿತ ಎಂದು ಸಿದ್ದರಾಮಯ್ಯ ಹೇಳಿದರು.

ಕೆ.ಆರ್.ಪೇಟೆ ಕೃಷ್ಣ ಅವರು ಅತ್ಯಂತ ಸಜ್ಜನರು, ಜನಪರ ಕಾಳಜಿ ಇದ್ದವರೂ ಆಗಿದ್ದರು. ಇವರನ್ನು ಮಂತ್ರಿ ಮಾಡಬೇಕು ಎಂಬ ಇಚ್ಚೆ ನಮ್ಮೆಲ್ಲರಿಗೂ ಇತ್ತು.‌ ಆದರೆ, ಮಂತ್ರಿ ಮಾಡಲು ದೇವೇಗೌಡರು ಒಪ್ಪಿರಲಿಲ್ಲ, ಆಗ ಸ್ಪೀಕರ್ ಆಗಲು ಸಲಹೆ ನೀಡಿದೆ ಎಂದು ತಮ್ಮ ಮತ್ತು ಕೆ.ಆರ್.ಪೇಟೆ ಕೃಷ್ಣ ಅವರ ನಡುವಿನ ಒಡನಾಟವನ್ನು ಸಿದ್ದು ಸ್ಮರಿಸಿದರು.

ಮೋದಿ ಅವರು ಹೇಳಿದ್ದರಲ್ಲಿ ಒಂದೇ ಒಂದು ಭರವಸೆ ಈಡೇರಿಸಿದ್ದರೆ ತೋರಿಸಲಿ ನೋಡೋಣ: ಸಿ.ಎಂ.ಸವಾಲು

ಮೋದಿ ಅವರು ಹೇಳಿದ್ದರಲ್ಲಿ ಒಂದೇ ಒಂದು ಭರವಸೆಯನ್ನು ಈಡೇರಿಸಿದ್ದರೆ ತೋರಿಸಲಿ ನೋಡೋಣ ಎಂದು ಇದೇ‌ ವೇಳೆ ಸಿಎಂ ಸವಾಲು ಹಾಕಿದರು.

ಮೋದಿಯವರಿಗೆ ಕರ್ನಾಟಕ ನೆನಪಾಗುವುದೇ ಚುನಾವಣೆ ಬಂದಾಗ. ಬರಗಾಲ ಬಂದಾಗಲೂ ರಾಜ್ಯದ ಕಡೆ ತಲೆ ಹಾಕಲಿಲ್ಲ. ಪ್ರವಾಹ ಬಂದಾಗ ರಾಜ್ಯದ ಕಡೆ ತಿರುಗಿಯೂ ನೋಡಲಿಲ್ಲ. ಚುನಾವಣೆ ಬಂತು ನೋಡಿ ಮೋದಿ ಓಡೋಡಿ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.


Share this with Friends

Related Post