ಚಾಮರಾಜನಗರ, ಏ.21: ಕಾವೇರಿ ನದಿಯ ಮಧ್ಯಭಾಗದಲ್ಲಿ ತೆಪ್ಪೋತ್ಸವದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಮೂಡಿಸಿದ್ದು ವಿಶೇಷವಾಗಿತ್ತು.
ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಗ್ರಾಮದ ಬಳಿಯ ಹೊಗೇನಕಲ್ ನಲ್ಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್ ಅವರು ಕಾವೇರಿ ದಡದ ಮಧ್ಯಭಾಗದಲ್ಲಿ ತೆಪ್ಪೋತ್ಸವದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರು.
ಇದಕ್ಕೂ ಮೊದಲು ಗೋಪಿನಾಥಂ ಗ್ರಾಮದ ಮಹಿಳೆಯರು ಗ್ರಾಮದಿಂದ ಹೊಗೇನೆಕಲ್ ಜಲಪಾತದ ದ್ವಾರದ ಮುಂಭಾಗದ ಕಾವೇರಿ ದಡದವರೆಗೆ ಪೂರ್ಣ ಕುಂಭ ಹಿಡಿದು ಪಿ.ಎಸ್ ವಸ್ತ್ರದ್ ಅವರನ್ನು ಸ್ವಾಗತಿಸಿದರು.
ಪಿ.ಎಸ್ ವಸ್ತ್ರದ್ ಮಾತನಾಡಿ ಎಲ್ಲರೂ ಏಪ್ರಿಲ್ 26ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಬೇಕು. ನಿಮ್ಮ ಹೆಸರು ಮತದಾನ ಪಟ್ಟಿಯಲ್ಲಿ ಇರುವ ಬಗ್ಗೆ ಹೆಲ್ಪ್ ಲೈನ್ ಆ್ಯಪ್ ಮುಖಾಂತರ ಖಚಿತಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಚುನಾವಣಾ ಸಂಬಂಧ ಯಾವುದೇ ಅಕ್ರಮ ಚಟುವಟಿಕೆಗಳು ಕಂಡು ಬಂದರೆ ಸಿ ವಿಜಿಲ್ ಆ್ಯಪ್ ನಲ್ಲಿ ದೂರು ಸಲ್ಲಿಸಬಹುದು. ಎಲ್ಲರೂ ನ್ಯಾಯ ಸಮ್ಮತ ಮತದಾನ ಮಾಡಿ ಹಾಗೂ ನೈತಿಕ ಮತದಾನ ಬೆಂಬಲಿಸಿ ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಹಣ, ಹೆಂಡ ಇತರೆ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಬೇಕು ಎಂದು ಕೋರಿದರು.
ಇದೇ ವೇಳೆ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪಿ. ಲಕ್ಷ್ಮೀ ಅವರು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಹನೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಸಹಾಯಕ ನಿರ್ದೇಶಕರಾದ ರವೀಂದ್ರ, ತಾಲೂಕು ಪಂಚಾಯತಿ ಹಾಗೂ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಹಾಯಕ ಎಂಜಿನಿಯರ್ ಹಾಜರಿದ್ದರು.