ಕೋಲ್ಕತ್ತಾ,ಏ.22: ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ನಡೆದಿದ್ದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016 ಅನ್ನು ಅನೂರ್ಜಿತಗೊಳಿಸಿ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ಜತೆಗೆ ಈ ಮೂಲಕ ಮಾಡಲಾದ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸುವಂತೆ ಆದೇಶಿರುವ ಕೋರ್ಟ್, ಕಾನೂನು ಬಾಹಿರವಾಗಿ ನೇಮಕಗೊಂಡ ಶಾಲಾ ಶಿಕ್ಷಕರು 4 ವಾರಗಳಲ್ಲಿ ತಮ್ಮ ವೇತನ ಹಿಂದಿರುಗಿಸಬೇಕು ಎಂದೂ ಸೂಚಿಸಿದೆ.
ಶಿಕ್ಷಕರಿಂದ ಹಣ ವಸೂಲಿ ಮಾಡುವ ಜವಾಬ್ದಾರಿಯನ್ನು ಆಯಾ ಜಿಲ್ಲಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ವಹಿಸಿದೆ.ಇದರಿಂದ ದೀದಿ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.
ನ್ಯಾಯಮೂರ್ತಿಗಳಾದ ದೇಬಂಗ್ಲು ಬಸಾಕ್ ಮತ್ತು ಮೊಹಮ್ಮದ್ ಶಬ್ಬರ್ ರಶೀದಿ ಅವರನ್ನೊಳಗೊಂಡ ವಿಭಾಗೀಯ ಪೀಠವು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಳ್ಳಲು ಮತ್ತು 3 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.
ಜೊತೆಗೆ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗಕ್ಕೆ ಹೊಸದಾಗಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆಯೂ ಹೇಳಿದೆ.
ಕೋಲ್ಕತ್ತಾ ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದೆ.
ಈ ಹಿಂದೆ 24640 ಖಾಲಿ ಹುದ್ದೆಗಳಿಗೆ 23 ಲಕ್ಷ ಅಭ್ಯರ್ಥಿಗಳು ಎಸ್ ಎಲ್ ಎಸ್ ಟಿ-2016 ಪರೀಕ್ಷೆ ಬರೆದಿದ್ದರು. ಆದರೆ ಸರ್ಕಾರ 24,640 ಖಾಲಿ ಹುದ್ದೆಗಳಿಗೆ ಒಟ್ಟು 25,753 ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಫಿರ್ದೌಸ್ ಶಮೀಮ್ ಆರೋಪಿಸಿದ್ದರು.
ಈ ಅರ್ಜಿ ವಿಚಾರಣೆಯನ್ನು ಕೋರ್ಟ್ ಸೋಮವಾರ ನಡೆಸಿತು.ಈ ದಿನಕ್ಕಾಗಿ ನಾವು ಕಾಯುತ್ತಿದ್ದೆವು,ಹಲವು ವರ್ಷಗಳ ಹೋರಾಟದ ಬಳಿಕ ಕೊನೆಗೂ ನ್ಯಾಯ ಸಿಕ್ಕಿದೆ ಎಂದು ಕೋರ್ಟ್ ಆದೇಶದ ಬಳಿಕ ಉದ್ಯೋಗ ಆಕಾಂಕ್ಷಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಿಭಾಗೀಯ ಪೀಠವನ್ನು ರಚಿಸಿದ್ದರು.