ಬೆಂಗಳೂರು,ಏ.23: ವಾಮಮರ್ಗದಲ್ಲಿ ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಅಕ್ರಮಗಳನ್ನು ಎಸಗುತ್ತಿದೆ ಎಂದು ಜೆಡಿಎಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ಸಹಿ ಮಾಡಿರುವ ಗ್ಯಾರಂಟಿ ಕಾರ್ಡುಗಳನ್ನು ಮತದಾರರಿಗೆ ಹಂಚಲಾಗುತ್ತಿದೆ. ಈ ಮೂಲಕ ಮುಗ್ಧ ಮತದಾರರಿಗೆ ಆಮಿಷ ಒಡ್ಡಿ ಅವರನ್ನು ವಂಚಿಸಲಾಗುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.
ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಹಿರಿಯ ಮುಖಂಡ ಆರ್.ಪ್ರಕಾಶ್ ಅವರ ನಿಯೋಗ ಕೇಂದ್ರೀಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ವಿರುದ್ಧ ದೂರು ನೀಡಿದೆ.
ಪಾರದರ್ಶಕವಾಗಿ, ನಿರ್ಭೀತಿ, ಭ್ರಷ್ಟಾಚಾರ ರಹಿತವಾಗಿ ನಡೆಯಬೇಕಿದ್ದ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡುಗಳನ್ನು ಹಂಚುವ ಮೂಲಕ ಕಲುಷಿತಗೊಳಿಸಿ ಅಕ್ರಮ ನಡೆಸುತ್ತಿದೆ ಎಂದು ಅವರು ದೂರಿದ್ದಾರೆ.
ನ್ಯಾಯ ಪತ್ರ ಹೆಸರಿನಲ್ಲಿ ಐದು ಗ್ಯಾರಂಟಿ ಕಾರ್ಡುಗಳ ಮೇಲೆ ಸಹಿ ಮಾಡಿ ಮತದಾರರಿಗೆ ಹಂಚಿಕೆ ಮಾಡುತ್ತಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮವಾಗಿದೆ.
ಆದ್ದರಿಂದ ಕೂಡಲೇ ಆ ಗ್ಯಾರಂಟಿ ಕಾರ್ಡುಗಳ ಹಂಚಿಯನ್ನು ತಡೆಯಬೇಕು ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಅಗ್ರಹಿಸಿದೆ.
ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದಕ್ಕೆ ಆಯೋಗ ಅತ್ಯಂತ ಕಠಿಣ ಕ ಜರುಗಿಸಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.