Tue. Dec 24th, 2024

ಬರ ಪರಿಹಾರ: ಚುನಾವಣಾ ಆಯೋಗದ ಅನುಮತಿ ಕೇಳಿದ್ದನ್ನೇ ಜಯವೆಂದ ಸಿದ್ದು:ಅಶೋಕ್ ವ್ಯಂಗ್ಯ

Share this with Friends

ಬೆಂಗಳೂರು, ಏ. 24: ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಚುನಾವಣಾ ಆಯೋಗದ ಅನುಮತಿ ಕೇಳಿದ್ದನ್ನೇ ಸಿಎಂ ತಮಗೆ ಸಿಕ್ಕ ಜಯ ಎಂಬಂತೆ ಬಿಂಬಿಸಿದ್ದಾರೆ ಎಂದು ಅಶೋಕ್ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆಗೆ ಅನುಮತಿಗಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಕುರಿತು ತಿಳಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ವೇಳೆಯೂ ಇದನ್ನು ತಿಳಿಸಲಾಗಿದೆ. ಆದರೆ ಕಾಂಗ್ರೆಸ್‌ ನಾಯಕರು ಜಯ ಸಿಕ್ಕಿದೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಹಣ ಬಿಡುಗಡೆಗಾಗಿಯೇ ಅನುಮತಿ ಕೇಳಿರುವಾಗ ಕಾಂಗ್ರೆಸ್‌ ಪಾತ್ರ ಇದರಲ್ಲಿ ಏನೂ ಇಲ್ಲ. ಜಯ ಸಿಗಲು ಕಾಂಗ್ರೆಸ್‌ನ ವಕೀಲರು ಏನೂ ವಾದ ಮಾಡಿಲ್ಲ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಹಾಗೂ ಸುರ್ಜೇವಾಲಾ ಅವರು ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ, ಇಲ್ಲಿ ಬಾಂಬ್‌ ಸ್ಫೋಟ ಆಗಿರುವಾಗ ನಿಮಗೆ ಮತ ಕೇಳಲು ಯಾವ ಅಧಿಕಾರ ಇದೆ ಎಂದು ಅಶೋಕ ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಕ್ರಮ ವಹಿಸಿದ್ದರಿಂದಲೇ ಬರ ಪರಿಹಾರ ಹಲವಾರು ರಾಜ್ಯಗಳಿಗೆ ದೊರೆಯುತ್ತಿದೆ. ಈಗಾಗಲೇ ಬರ ಪರಿಹಾರವನ್ನು ರಾಜ್ಯ ಸರ್ಕಾರದ ವತಿಯಿಂದ ನೀಡಬೇಕಿತ್ತು. ಎಸ್‌ಡಿಆರ್‌ಎಫ್‌ನಿಂದ 700 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ರಾಜ್ಯ ಸರ್ಕಾರವೇ ನೀಡಿದಂತೆ ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು ನ

2013-14 ರಲ್ಲಿ ಬರ ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ 9 ತಿಂಗಳು ತೆಗೆದುಕೊಂಡಿದ್ದರು. ಕೇಂದ್ರದಲ್ಲೀಗ ಬಿಜೆಪಿ ಇದೆ ಎಂಬ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಮೋದಿ ಸರ್ಕಾರ 7,940 ಕೋಟಿ ರೂ ಪರಿಹಾರ ನೀಡಿದ್ದರೆ, ಮನಮೋಹನ್‌ ಸಿಂಗ್‌ ಸರ್ಕಾರ 3,000 ಕೋಟಿ ರೂ. ನೀಡಿದೆ. ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿದರು.

ನೇಹಾ ಹತ್ಯೆಯ ತನಿಖೆಯನ್ನು ಸಿಬಿಐಗೆ ಕೊಡದೆ ಸಿಐಡಿಗೆ ನೀಡಿ ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ,ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಮಾಂಗಲ್ಯ ಕುರಿತು ನೀಡುವ ಹೇಳಿಕೆ ಸರಿಯಾಗಿಯೇ ಇದೆ. ಹಿಂದೆ ಮನಮೋಹನ್‌ ಸಿಂಗ್‌ ಅವರು ಮುಸ್ಲಿಮರಿಗೆ ಸಂಪತ್ತಿನ ಹಂಚಿಕೆ ಬಗ್ಗೆ ಹೇಳಿದ್ದರು ಎಂದು ಸಮರ್ಥಿಸಿಕೊಂಡರು.

ಇದೇ ಸಂದರ್ಭದಲ್ಲಿ ಸತ್ಯ ಸಂಗತಿ ಮರೆಮಾಚಿ ಜನರನ್ನು ವಂಚಿಸುತ್ತಿರುವ ಕಾಂಗ್ರೆಸ್ ಮುಖವಾಡ ಬಯಲು ಮಾಡುವ ಪಿಕ್ ಪಾಕೇಟ್ ಕಾಂಗ್ರೆಸ್ ಮತ್ತು ಕನ್ನಡಿಗರ ಕೈಗೆ ಚಿಪ್ಪುಪೋಸ್ಟರ್ ಗಳನ್ನು ಅಶೋಕ್ ಬಿಡುಗಡೆ ಮಾಡಿದರು.

ವಿಧಾನಸೌಧದಲ್ಲಿ ಕಾಂಗ್ರೆಸ್‌ ಪ್ರತಿಭಟನೆಗೆ ಅವಕಾಶ ನೀಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರತಿಭಟಿಸಿದ ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ಇದೇ ವೇಳೆ ಅಶೋಕ್ ತಿಳಿಸಿದರು.


Share this with Friends

Related Post