Mon. Dec 23rd, 2024

ನೇಹಾ ಕೊಲೆ ಪ್ರಕರಣ:ಆರೋಪಿಗೆ ಕಠಿಣ ಶಿಕ್ಷೆ ನೀಡಲು ಸಿಐಡಿ ತನಿಖೆ ಚುರುಕು-ಸಿಎಂ

Share this with Friends

ಬೀದರ್, ಏಪ್ರಿಲ್ 25: ನೇಹಾ ಹೀರೆಮಠ ಕೊಲೆ ಪ್ರಕರಣದ ಆರೋಪಿಗೆ ಘೋರ ಶಿಕ್ಷೆ ನೀಡಲು ಸಿಐಡಿ ತನಿಖೆ ತೀವ್ರಗೊಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೀದರ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ,‌ಈ ಕೊಲೆ ಪ್ರಕರಣವನ್ನು ನಮ್ಮ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದಾದರೂ ಪ್ರಕರಣವನ್ನು ಸಿಬಿಐಗೆ ವಹಿಸಿದೆಯೇ ಎಂದು ಪ್ರಶ್ನಿಸಿದರು.

ನಾನು ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೇನೆ. ಅವರಿಗೆ ಕೇಳಲು ಯಾವ ನೈತಿಕ ಹಕ್ಕಿದೆ ಇದರಲ್ಲೆಲ್ಲಾ ರಾಜಕೀಯ ಮಾಡಬಾರದು ಎಂದು ಹೇಳಿದರು.

ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರಿ ಅಭಿಯೋಜಕರೊಂದಿಗೆ ಮಾತನಾಡಿದ್ದೇನೆ, ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ ಸಿಐಡಿ ತನಿಖೆ ನಡೆದಿದ್ದು ಆರೋಪಪಟ್ಟಿಯನ್ನು ಸಿದ್ದಪಡಿಸಲಿದೆ ಎಂದು ‌ತಿಳಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನರ ಆಸ್ತಿ ಕಸಿದುಕೊಂಡು ಸಂಪತ್ತು ಹಂಚುವ ಬಗ್ಗೆ ಮೋದಿಯವರು ಟೀಕಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಮೋದಿಯವರು ನೀಡಿದ ಒಂದೂ ಭರವಸೆಗಳನ್ನು ಈಡೇರಿಸಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.,2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಗಳನ್ನು ಈಡೇರಿಸಿದರೇ ಅಗತ್ಯವಸ್ತುಗಳ ಬೆಲೆಯನ್ನು ಮೋದಿಯವರು ಕಡಿಮೆ ಮಾಡಿದ್ದಾರೆಯೇ ಎಂದು ಸಿಎಂ ಮರು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಎಸ್ ಸಿ ಎಸ್ ಟಿಗೆ ನೀಡಲಾಗಿರುವ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಲಿದೆ ಎಂದು ಮೋದಿಯವರು ಹೇಳಿದ್ದಾರಲ್ಲಾ ಎಂದು ಕೇಳಿದ್ದಕ್ಕೆ ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸ್ಸಿನಂತೆ ಮುಸ್ಲಿಂ ಸಮುದಾಯಕ್ಕೆ ಶೇ.4 ರಷ್ಟು ಮೀಸಲಾತಿ 1994 ರಿಂದ ಜಾರಿಗೆ ಬಂದಿತ್ತು. ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾಲದಲ್ಲಿ ಈ ಮೀಸಲಾತಿಯನ್ನು ಹಿಂಪಡೆದಿದ್ದಕ್ಕೆ ಈ ವರ್ಗ ಸುಪ್ರಿಂ ಕೋರ್ಟ್ ಮೊರೆ ಹೋಯಿತು. ಆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಶೇ. 4 ಮೀಸಲಾತಿ ಮುಂದುವರೆಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದು, ಅದೇ ಮೀಸಲಾತಿ ಈಗಲೂ ಮುಂದುವರೆಯುತ್ತಿದೆ ಅಷ್ಟೇ ಎಂದರು ಸಿದ್ದರಾಮಯ್ಯ.


Share this with Friends

Related Post