ಮೈಸೂರು, ಏ.26: ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಬೆಳಗಿನಿಂದಲೇ ಬಿರುಸಿನ ಮತದಾನ ನಡೆಯಿತು.
ಯುವ ಜನತೆ ಮತ್ತು ಮೊದಲ ಬಾರಿಗೆ ಮತದಾನ ಮಾಡುವವರು, ಹಿರಿಯ ನಾಗರಿಕರು, ವಿಕಲಚೇತನರು ಕೂಡ ಅತ್ಯುತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಒಂದೆರಡು ಮತಗಟ್ಟೆಗಳಲ್ಲಿ ಸ್ವಲ್ಪ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು, ಕೆಲವೆಡೆ ಸಣ್ಣಪುಟ್ಟ ಜಗಳ ನಡೆದರೆ ಜಿಲ್ಲೆಯಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆದಿದೆ.
ಮತ್ತೆ ಕೆಲವೆಡೆ ಪೊಲಿಂಗ್ ಏಜೆಂಟ್ ಗಳು ನೆಟ್‌ವರ್ಕ್ ಪ್ರಾಬ್ಲಮ್ ಎಂದು ಹೇಳಿ ಮತದಾರರಿಗೆ ಮತಗಟ್ಟೆಯ ತಪ್ಪು ಸಂಖ್ಯೆ ನೀಡಿದ್ದರಿಂದ ಮತದಾರರು ಸರತಿ ಸಾಲಿನಲ್ಲಿ ನಿಂತು ವಾಪಸಾಗಿ ವಾದ ಮಾಡುತ್ತಿದ್ದು ಕಂಡು ಬಂದಿತು.
ನಗರದಲ್ಲಿ ಗಣ್ಯರು ಬೆಳಗ್ಗೆ ಬೇಗನೆ ಬಂದು ಮತ ಹಾಕಿ ಯುವಜನತೆಗೆ ಮಾದರಿಯಾದರು.
ಮೈಸೂರಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಮತದಾನ ಮತದಾನ ಮಾಡಿದರು.
ಮೈಸೂರಿನ ಶ್ರೀಕಾಂತ ಶಾಲೆಯಲ್ಲಿ ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಪತ್ನಿ ತ್ರಿಷಿಕಾ ಹಾಗೂ ತಾಯಿ ರಾಜಮಾತೆ ಪ್ರಮೋದ ದೇವಿ ಒಡೆಯರ್ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು.ಎಲ್ಲರೂ ಮರೆಯದೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ನಗರದ ಸಂಸ್ಕೃತ ಪಾಠಶಾಲೆಯಲ್ಲಿ ಶಾಸಕ ಶ್ರೀವತ್ಸ ಮತ ಚಲಾಯಿಸಿದರೆ,ತಮ್ಮ ಹುಟ್ಟೂರು ಗುಂಗ್ರಾಲ್ ಛತ್ರದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಸಕ ಜಿ ಟಿ ದೇವೇಗೌಡರು ಪತ್ನಿ ಕೆ. ಲಲಿತಾ ಅವರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿದರು.
ನಗರದ ಜಲಪುರಿ ಪಬ್ಲಿಕ್ ಶಾಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಭಾನೊತ್ ಮತ್ತು ಅವರ ಪತ್ನಿ ತಮ್ಮ ಹಕ್ಕು ಚಲಾಯಿಸಿದರು.
ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್ ನಾಗೇಂದ್ರ ಅವರು ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು.
ರಾಮಾನುಜ ರಸ್ತೆಯಲ್ಲಿರುವ ಸೇಂಟ್ ಮೇರಿಸ್ ಶಾಲೆಯಲ್ಲಿ ಮಾಜಿ ಶಾಸಕ ಎಸ್. ಎ. ರಾಮದಾಸ್ ಮತದಾನ ಮಾಡಿದರು.
ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸುತ್ತೂರು ಶ್ರೀ ಕ್ಷೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಅರಸು ಬೋರ್ಡಿಂಗ್ ಶಾಲೆಯಲ್ಲಿ ಶಾಸಕ ಹರೀಶ್ ಗೌಡ ಅವರು ತಮ್ಮ ಕುಟುಂಬದವರೊಂದಿಗೆ ಬಂದು ಮತ ಹಾಕಿದರು.
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ನಿರ್ದೇಶಕರಾದ ಶ್ರೀದೇವಿ ಅನ್ನಪೂರ್ಣ ಸಿಂಗ್ ದಂಪತಿ ಗೋಕುಲಂ ನಿರ್ಮಲ ಶಿಕ್ಷಣ ಸಂಸ್ಥೆಯಲ್ಲಿ ಮತದಾನ ಮಾಡಿದರು.
ಮೈಸೂರಿನ ಶಂಕರ ಮಠ ರಸ್ತೆಯಲ್ಲಿರುವ ಶ್ರೀಕಾಂತ ಶಾಲೆಯ ಆವರಣದಲ್ಲಿ 101 ವರ್ಷದ ತಿಮ್ಮಮ್ಮನವರು ಆಟೋದಲ್ಲಿ ಆಗಮಿಸಿ ತಮ್ಮ ಮತ ಚಲಾಯಿಸಿ ಯುವ ಜನರಿಗೆ ಸ್ಫೂರ್ತಿ ತುಂಬಿದರು.
ಅಶೋಕ್ ಮಜಳಲಿ ( 83) ಎಂಬವರು
ವಿಜ್ಞಾನಿ. ಮುಂಬೈನವರು, ಮೈಸೂರಿನಲ್ಲಿ ನೆಲೆಸಿದ್ದು 60 ನೆ ಇಸವಿಯಿಂದ ಮತದಾನ ಮಾಡುತ್ತಿರುವುದಾಗಿ ಹೇಳಿ
ಮೈಸೂರಿನ ಶ್ರೀಕಾಂತ ಮಹಿಳಾ ಪೂರ್ವ ಕಾಲೇಜಿನಲ್ಲಿ ಮತದಾನ ಮಾಡಿದರು.
ಮತದಾನ ಮಾಡಿ ಮನೆಗೆ ಬಂದ ವೃದ್ದೆ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.
ಪುಟ್ಟಮ್ಮ (90) ಸಾವನ್ನಪ್ಪಿದ್ದು,
ಕಲ್ಲಳ್ಳಿ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿ ಆರಾಮವಾಗಿಯೇ ಬಂದಿದ್ದರು.ಅದೇನಾಯಿತೊ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾರೆ.