ಬೆಂಗಳೂರು,ಏ.28: ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಬೆಂಗಳೂರಿನ ಎಡಿಜಿಪಿ ಬಿಜಯಕುಮಾರ್ ಸಿಂಗ್, ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾದ ಸುಮನ್ ಡಿ. ಪನ್ನೇಕರ್ ಹಾಗೂ ಮೈಸೂರು ಎಸ್ಪಿ ಸೀಮಾ ಲಾಠ್ಕರ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿದೆ.
ಬಿಜಯ ಕುಮಾರ್ ಸಿಂಗ್ ತಂಡದ ಮುಖ್ಯಸ್ಥರು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಅಂಬಿಕಾ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಸಲಾಗುತ್ತಿರುವ ಲೈಂಗಿಕ ಹಿಂಸೆಯ ಖಾಸಗಿ ವೀಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.
ಈ ಹಿನ್ನೆಲೆಯಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿಗಳು ಮತ್ತು ಅದನ್ನು ಸಾರ್ವಜನಿಕವಾಗಿ ಹರಿಬಿಟ್ಟ ವ್ಯಕ್ತಿಗಳನ್ನು ಪತ್ತೆ ಹಚ್ಚಿ ತನಿಖೆಗೆ ಒಳಪಡಿಸುವುದು ಮತ್ತು ಮಹಿಳೆಯರ ಘನತೆ ಹಾಗೂ ಅಸ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಲು ಈ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಹಾಸನ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಸಂತ್ರಸ್ತೆಯಿಂದ ದೂರು ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.