Mon. Dec 23rd, 2024

ಯುಪಿಎ ಸರ್ಕಾರ ನೆರವು ನೀಡಿಲ್ಲ:ಅಶೋಕ್ ಆರೋಪ

Share this with Friends

ಬೆಂಗಳೂರು, ಏ.30: ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ಛೀಮಾರಿ ಹಾಕಿಸಿಕೊಂಡು ಬರಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದ ಇತಿಹಾಸದಲ್ಲೇ ದಾಖಲೆಯ ಪ್ರಮಾಣದ ಬರ ಪರಿಹಾರವನ್ನು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನೀಡಿದೆ ಎಂದು ತಿಳಿಸಿದರು.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹಿಂದೆ ಯಾವುದೇ ನೆರವು ನೀಡಲಿಲ್ಲ. ಅದನ್ನು ಹೇಳುವ ಯೋಗ್ಯತೆ ಕೂಡ ರಾಜ್ಯ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಟೀಕಿಸಿದರು.
.
ಹಿಂದೆ ಬರ-ಪ್ರವಾಹ ಪರಿಹಾರ ಕೇಳಿದ್ದಾಗ ಯುಪಿಎ ಸರ್ಕಾರ ಶೇ 8-9 ರಷ್ಟು ಮಾತ್ರ ನೀಡಿದೆ. ಆದರೆ ಮೋದಿ ಸರ್ಕಾರ ಹೆಚ್ಚುವರಿ ಪರಿಹಾರ ನೀಡಿದೆ. ನಾನು ಅಂಕಿ ಅಂಶ ಸಮೇತ ಸವಾಲು ಹಾಕಿದ್ದರೂ ಅದರ ಬಗ್ಗೆ ಯಾರೂ ಮಾತಾಡುತ್ತಿಲ್ಲ ಎಂದು ಹೇಳಿದರು.

ಇದನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರ ನ್ಯಾಯಾಲಯಕ್ಕೆ ಹೋದರೆ ಎಲ್ಲ ಹಿಂದಿನ ವಿಚಾರ ಹೊರಬರಲಿದೆ. ನ್ಯಾಯಾಲಯದಿಂದ ಸರ್ಕಾರ ಛೀಮಾರಿ ಹಾಕಿಸಿಕೊಳ್ಳಲಿದೆ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಈ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಕಾನೂನಿನಡಿ ಎಲ್ಲರೂ ಸಮಾನರು. ಸರ್ಕಾರ ತನಿಖೆ ಮಾಡಲು ತಂಡ ರಚಿಸಿದ್ದು, ತೀರ್ಪು ಬಂದ ನಂತರ ಸರ್ಕಾರ ಕ್ರಮ ವಹಿಸಲಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರದಲ್ಲಿ ನಾನು ಕೂಡ ತೊಡಗಿಸಿಕೊಂಡಿದ್ದೇನೆ. ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಉತ್ತಮ ಪ್ರಚಾರ ಮಾಡಲಾಗುತ್ತಿದೆ‌ ಎಂದು ಹೇಳಿದರು.

ಹಿರಿಯ ನಾಯಕರು ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅವರು ನಿಧನ ರಾಗಿರುವುದು ಬಹಳ ದುಃಖದ ಸಂಗತಿ. ಅವರ ಕುಟುಂಬಕ್ಕೆ, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ ಎಂದು ಆರ್.ಅಶೋಕ್ ನುಡಿದರು.


Share this with Friends

Related Post