Mon. Dec 23rd, 2024

ಮತ್ತೆ ಅಧಿಕಾರಕ್ಕೆ ಬರುವುದಿಲ್ಲವೆಂದು ಮೋದಿಯವರಿಗೆ ಖಚಿತವಾಗಿದೆ:ಸಿದ್ದು

Share this with Friends

ವಿಜಯನಗರ (ಕೂಡ್ಲಿಗಿ) ಏ.30: ಮತ್ತೆ ಅಧಿಕಾರಕ್ಕೆ ಬರುವುದಿಲ್ಲವೆಂದು ಮೋದಿಯವರಿಗೆ ಖಚಿತವಾಗಿದೆ ಎಂಬುದಾಗಿ ಸಿಎಂ ಸಿದ್ದರಾಮಯ್ಯ ನುಡಿದರು.

ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರ ಪರ ಕೂಡ್ಲಿಗಿಯಲ್ಲಿ ಏರ್ಪಡಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಆಕ್ಸಿಸ್ ಪ್ರಕಟಿಸಿದ ಖಚಿತವಾದ ಸಮೀಕ್ಷೆಗಳನ್ನು ಮೋದಿ ಡಿಲೀಟ್ ಮಾಡಿಸುತ್ತಿರುವುದಕ್ಕೆ ಸೋಲಿನ ಭಯವೇ ಕಾರಣ.‌ ಸೋಲು ಖಚಿತವಾಗುತ್ತಿದ್ದಂತೆ ಹೆಚ್ಚು ಸುಳ್ಳುಗಳನ್ನು ಸೃಷ್ಟಿಸಿ ಭಾರತೀಯರ ನಡುವೆ ಬಿರುಕು ಮೂಡಿಸುತ್ತಾರೆ ಜಾಗ್ರತೆ ವಹಿಸಿ ಎಂದು ಸಿದ್ದು ಎಚ್ಚರಿಕೆ ನೀಡಿದರು.

ಮೋದಿ ಪ್ರಧಾನಿಯಾಗಿ ದೇಶದ ಜನರ ಕೈಗೆ ಚೊಂಬು ಕೊಟ್ಟರು, ಶ್ರೀರಾಮುಲು ಸಚಿವರಾಗಿ, ಸಂಸದರಾಗಿ ಬಳ್ಳಾರಿ ಜಿಲ್ಲೆಗೆ ಚೊಂಬು ಕೊಟ್ಟರು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಮೋದಿ ಮತ್ತು ಶ್ರೀರಾಮುಲು ಬಳ್ಳಾರಿ ಜನಕ್ಕೆ ಕೊಟ್ಟ ಚೊಂಬನ್ನು ನೀವು ಶ್ರೀರಾಮುಲು ಕೈಗೆ ವಾಪಾಸ್ ಕೊಡಿ ಎಂದು ಸಿಎಂ ಕರೆ ನೀಡಿದರು.

ಆಕ್ಸಿಸ್ ಪ್ರಕಟಿಸಿದ ಖಚಿತವಾದ ಸಮೀಕ್ಷೆಗಳನ್ನು ಮೋದಿ ಡಿಲೀಟ್ ಮಾಡಿಸುತ್ತಿರುವುದಕ್ಕೆ ಸೋಲಿನ ಭಯವೇ ಕಾರಣ. ಬಿಜೆಪಿ 200 ಸ್ಥಾನ ಗೆದ್ದರೆ ಹೆಚ್ಚು ಎನ್ನುವ ಸಮೀಕ್ಷೆಗಳು ಬಂದಿವೆ. ತಮ್ಮ ಸೋಲನ್ನು ಖಚಿತಪಡಿಸುವ ಸಮೀಕ್ಷೆಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಮೀಸಲಾತಿ ವಿಷಯ ಪ್ರಸ್ತಾಪಿಸಿ ಹಿಂದುಳಿದವರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಮೋದಿ ಸ್ಕೆಚ್ ವಿಫಲಗೊಳಿಸಿ ಎಂದು ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮಹಿಳೆಯರ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಬರಲಿದೆ, ನಿರುದ್ಯೋಗಿಗಳ ಖಾತೆಗೂ ಒಂದು ಲಕ್ಷ ರೂಪಾಯಿ ಜಮೆ ಆಗುತ್ತದೆ, ದೇಶದ ರೈತರ ಸಾಲ ಮನ್ನಾ ಆಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅಂಬಾನಿ, ಅದಾನಿಯಂತಹ ಆಗರ್ಭ ಶ್ರೀಮಂತರ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರು.

ರೈತರ ಸಾಲ ಮನ್ನಾ ಮಾಡಲು ಒಪ್ಪದ ಮೋದಿ ಯಾರ ಪರ ಎನ್ನುವುದು ದೇಶದ ಜನರಿಗೆ ಮನವರಿಕೆಯಾಗಿದೆ ಎಂದರು.

ಆದ್ದರಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಈ.ತುಕಾರಾಂ ಗೆಲ್ಲಲೇಬೇಕು, ಶ್ರೀರಾಮುಲು ಸೋಲಲೇಬೇಕು ಇದು ನನ್ನ ಸ್ಪಷ್ಟ ತೀರ್ಮಾನ, ನನ್ನ ತೀರ್ಮಾನಕ್ಕೆ ಮತ್ತು ಈ.ತುಕಾರಾಂ ಅವರಿಗೆ ಆಶೀರ್ವದಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಜಮೀರ್ ಅಹಮದ್, ರಾಮಲಿಂಗಾರೆಡ್ಡಿ ಹಾಗೂ ವಿಜಯನಗರ, ಬಳ್ಳಾರಿ ಜಿಲ್ಲೆಯ ಶಾಸಕರುಗಳು, ಜಿಲ್ಲಾ ಮತ್ತು ತಾಲ್ಲೂಕು ಬ್ಲಾಕ್ ಮುಖಂಡರುಗಳು ಉಪಸ್ಥಿತರಿದ್ದರು.


Share this with Friends

Related Post