Mon. Dec 23rd, 2024

ಏಕಾಏಕಿ‌ ಯಾರನ್ನೂ ಬಂಧಿಸಲಾಗದು, ಪುರಾವೆ ಬೇಕು: ಜಿ.ಪರಮೇಶ್ವರ್

Share this with Friends

ಬೆಂಗಳೂರು,ಮೇ.1: ಏಕಾಏಕಿ‌ ಯಾರನ್ನೂ ಬಂಧಿಸಲಾಗದು ಎಲ್ಲದಕ್ಕೂ, ಪುರಾವೆಗಳು ಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

ಸಂಸದ ಪ್ರಜ್ವಲ್ ಹಾಗೂ ಅವರ ತಂದೆ ಶಾಸಕ ಹೆಚ್.ಡಿ.ರೇವಣ್ಣ ಅವರ ಪೆನ್ಡ್ರೈವ್
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾರನ್ನೇ ಆದರೂ ಏಕಾಏಕಿ ಬಂಧಿಸಲಾಗುವುದಿಲ್ಲ ಅದಕ್ಕೆ ಪುರಾವೆಗಳು
ಬೇಕು ಎಂದು ಹೇಳಿದರು.

ದೂರಿನಲ್ಲಿ ಏನು ಹೇಳಿರುತ್ತಾರೆ ಎಂಬುದೆಲ್ಲ ಮುಖ್ಯವಾಗುತ್ತವೆ, ಪ್ರಕರಣ ಯಾವ ಸೆಕ್ಷನ್ ಅಡಿಯಲ್ಲಿ ಬರುತ್ತದೆ, ಅದರಲ್ಲಿ ಬಂಧಿಸಲು ಅವಕಾಶ ಇದೆಯೇ, ಜಾಮೀನು ಪಡೆಯುವಂಥ ಪ್ರಕರಣವೇ ಈ ಅಂಶಗಳನ್ನೆಲ್ಲ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ, ಯಾರನ್ನೂ ರಕ್ಷಣೆ ಮಾಡುವಂತಹದ್ದೇನಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದರಲ್ಲಿ ಅನೇಕ ಮಹಿಳೆಯರ ಜೀವನದ ಪ್ರಶ್ನೆ ಇದೆ. ಇಷ್ಟ ಬಂದ ಹಾಗೆ ತನಿಖೆ‌ ಮಾಡಲು ಆಗುವುದಿಲ್ಲ. ಹಾಗಾಗಿಯೇ ಎಸ್​ಐಟಿ ರಚನೆ ಮಾಡಲಾಗಿದೆ ಎಂದು ಹೇಳಿದರು.

ಹೆಚ್​ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವಣ ಆರೋಪ ಪ್ರತ್ಯಾರೋಪಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಬಹಳ ಜನ ಅದರ ಬಗ್ಗೆ ಹೇಳಿಕೆ ಕೊಡ್ತಿದ್ದಾರೆ. ಅದಕ್ಕೆಲ್ಲ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ತನಿಖಾ ವರದಿ ಬಂದ ಮೇಲೆ ಸತ್ಯಾಸತ್ಯತೆ ಮೇಲೆ ಕ್ರಮ ಆಗುತ್ತದೆ‌. ತನಿಖಾ ವರದಿ ಬರುವ ವರೆಗೂ ಯಾರೂ ಹೇಳಿಕೆ ಕೊಡಬಾರದು ಎಂದು ತಿಳಿಸಿದರು.

ವಿದೇಶದಲ್ಲಿರೋ ಪ್ರಜ್ವಲ್ ವಾಪಸ್ ಕರೆದುಕೊಂಡು ಬರಲು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಎಸ್​ಐಟಿ ಮಾಡಲಿದೆ, ಇದಕ್ಕೆ ಕೇಂದ್ರ ಸರ್ಕಾರದ ಸಹಕಾರವೂ ಬೇಕಾಗಬಹುದು. ಅಥವಾ ಎಸ್​ಐಟಿ ತಂಡದವರೇ ಕರೆದುಕೊಂಡು ಬರಬಹುದು ಎಂದು ಪರಮೇಶ್ವರ್ ಹೇಳಿದರು.


Share this with Friends

Related Post