Mon. Dec 23rd, 2024

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ:ಡಿಸಿ ಸೂಚನೆ

Share this with Friends

ಮೈಸೂರು ಮೇ.2: ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆ ನಡೆಸಿ ರಾಜೇಂದ್ರ ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ, ಎಲ್ಲಾ ತಹಶೀಲ್ದಾರ್ ಗಳು , ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು‌ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರತಿದಿನ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅನುದಾನದ ಕೊರತೆ ಇಲ್ಲ ಸಮರ್ಪಕ ಹಾಗೂ ಸಮನ್ವಯವಾಗಿ ಕಾರ್ಯನಿರ್ವಹಿಸಬೇಕು,ಅವಶ್ಯಕತೆ ಇರುವಷ್ಟು ಖಾಸಗಿ ಬೊರ್ವೇಲ್ ಗಳನ್ನು ಪಡೆದು ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡಿ ಎಂದು ತಿಳಿಸಿದರು.

ಮುಂಜಾಗ್ರತ ಕ್ರಮವಾಗಿ ಅಗತ್ಯವಿರುವಷ್ಟು ಖಾಸಗಿ ಬೊರ್ವೇಲ್ ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇದರಿಂದ ಬರವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಅಧಿಕಾರಿಗಳು ಮುಂದಾಗಬೇಕುಎಂದರು.

ಬರಗಾಲದಲ್ಲಿ ಕೆರೆಗಳು ಪ್ರಮುಖ ಪಾತ್ರವಹಿಸಲಿದ್ದು, ಜಿಲ್ಲೆಯಾದ್ಯಂತ ಇರುವ ಕೆರೆಗಳ ಮಾಹಿತಿ ಹಾಗೂ ಹೂಳೆತ್ತುವ ಕೆಲಸ ಪ್ರಾರಂಭಿಸಿ,ಜತೆಗೆ ಒತ್ತುವರಿ ಆಗಿರುವ ಕೆರೆಗಳ ಪಟ್ಟಿಮಾಡಿ ಎಂದು ಡಿಸಿ ಸೂಚಿಸಿದರು.

ಕೆರೆಯಲ್ಲಿ ಹೂಳೆತ್ತುವಾಗ ಸಿಗುವ ಮಣ್ಣು ಮೂಲಸೌಕರ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಹೂಳೆತ್ತುವ ಕೆರೆಗಳಿಂದ ಮಣ್ಣನ್ನು ಉಪಯೋಗಿಸಿಕೊಳ್ಳಬಹುದು ಇದನ್ನು ರೈತರು ಸಹ ಬಳಸಿಕೊಳ್ಳಬಹುದು ಎಂದು ಎಂದು ಸಲಹೆ ನೀಡಿದರು.

ತಾಲ್ಲೂಕುವಾರು ಸ್ಥಳೀಯ ರೈತ ಮುಖಂಡರ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ತೊಂದರೆ, ಗೋ ಶಾಲೆಗಳ ಅಗತ್ಯತೆಗಳ ಬಗ್ಗೆ ಅವರಿಂದ ದೂರು ಪಡೆದು ಅದನ್ನು ಬಗೆಹರಿಸಲು ಮುಂದಾಗಬೇಕು ಎಂದರು.

ಪ್ರಸ್ತುತ ಕಲರಾ ಪ್ರಕರಣವು ಕಂಡು ಬರುತ್ತಿದ್ದು, ಪೂರೈಕೆ ಆಗುವ ನೀರು ಶುದ್ಧವಾಗಿದೆಯೇ ಎಂಬುದನ್ನು ಪರೀಕ್ಷಿಸಿ ನಂತರ ಸಾರ್ವಜನಿಕರಿಗೆ ನೀರನ್ನು ಒದಗಿಸಬೇಕು ಎಂದು ತಿಳಿಸಿದರು.

ಬಿಸಿಲು ಹೆಚ್ಚಾಗಿರುವುದರಿಂದ ಲಿಕ್ವಿಡ್ ಆಹಾರವನ್ನು ಸೇವಿಸಬೇಕು.ಕಾಟನ್ ಬಟ್ಟೆಗಳನ್ನು ಧರಿಸುವಂತೆ ಜನರಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಾದ್ಯಂತ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಕೂಡಲೇ 1077 ಕಂಟ್ರೋಲ್ ರೂಮ್ ಗೆ ಕರೆ ಮಾಡಿ ದೂರನ್ನು ಸಲ್ಲಿಸಬಹುದು ಎಂದು ಕೆ.ವಿ.ರಾಜೇಂದ್ರ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ. ಎಂ ಗಾಯಿತ್ರಿ ಮಾತನಾಡಿ,ಕಾಲರ ಇರುವುದರಿಂದ ಬೀದಿಬದಿ ಮಾರಾಟ ಮಾಡುವ ವ್ಯಾಪಾರಿಗಳು ಸುರಕ್ಷಿತ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆಯೇ ಎಂಬುದನ್ನು ಪರೀಕ್ಷಿಸಬೇಕು, ಪ್ರತಿಯೊಬ್ಬರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತಾರಾದ ಎನ್.ಎನ್ ಮಧು, ನಂಜನಗೂಡು, ಪಿರಿಯಾಪಟ್ಣ, ಮೈಸೂರು, ಎಚ್ ಡಿ ಕೋಟೆ, ಸರಗೂರು, ತಿ.ನರಸೀಪುರ, ಹುಣಸೂರು ಹಾಗೂ ಕೆ ಆರ್ ನಗರ ತಾಲೂಕಿನ ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post