Mon. Dec 23rd, 2024

ಯುವಕನ ಅಪಹರಿಸಿ ಹಣ,ಆಭರಣ ದೋಚಿದ್ದವರು ಅಂದರ್

Share this with Friends

ಮೈಸೂರು,ಮೇ.3: ಯುವಕನ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಗದು, ಚಿನ್ನಾಭರಣ ದೋಚಿದ್ದ ಮೂರು ಮಂದಿಯನ್ನು ವಿವಿ ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ತಾಲೂಕಿನ ಕಾಮನಕೆರೆ ಹುಂಡಿಯ ರಾಹುಲ್(20), ಬೆಳವಾಡಿಯ ಅಖಿಲೇಶ್(19) ಹೂಟಗಳ್ಳಿಯ ನಂದೀಶ್(19) ಬಂಧಿತ ಆರೋಪಿಗಳು.

ಈ ಆರೋಪಿಗಳು ನಗರದ ರೇಲ್ವೆ ನಿಲ್ದಾಣದ ಬಳಿ ಕಾರಿನಲ್ಲಿ ತೆರಳುತ್ತಿದ್ದ ಯುವಕ ಚಿರಾಗ್ ಜೈನ್ ಎಂಬಾತನನ್ನ ಅಡ್ಡಗಟ್ಟಿ ಕಾರಿನ ಸಮೇತ ಅಪಹರಿಸಿ ಯಶಸ್ವಿನಿ ಕಲ್ಯಾಣ ಮಂಟಪದ ಬಳಿಗೆ ಕರೆದೊಯ್ದಿದ್ದಾರೆ.

ನಂತರ 2 ಸಾವಿರ ರೂ, 39 ಗ್ರಾಂ ತೂಕದ ಎರಡು ಚಿನ್ನದ ಸರ ದೋಚಿ ಇಡೀ ರಾತ್ರಿ ಬಂಧನದಲ್ಲಿರಿಸಿಕೊಂಡು ನಂತರ ಬಿಡುಗಡೆ ಮಾಡಿದ್ದಾರೆ.

ಶನಿವಾರ ತಡ ರಾತ್ರಿ ರಾಜಸ್ತಾನದಿಂದ ಆಜ್ಮೀರ್ ಎಕ್ಸ್‌ಪ್ರೈಸ್ ರೈಲಿನಲ್ಲಿ ಬಂದಿದ್ದ ತಂದೆ-ತಾಯಿಯನ್ನು ಕರೆದುಕೊಂಡು ಹೋಗಲು ರೈಲ್ವೆ ನಿಲ್ದಾಣದ ಹಿಂಭಾಗದ ಗೇಟ್ ಕಡೆ ಹೋಗುತ್ತಿದ್ದಾಗ ಸ್ಕೂಟರ್‌ನಲ್ಲಿ ನಿಂತಿದ್ದ ಈ ಮೂವರು ಅಡ್ಡಗಟ್ಟಿ ಕಾರನ್ನು ನಿಲ್ಲಿಸಿ ಗಲಾಟೆ ಮಾಡಿ ಕಾರಿನಿಂದ ಚಿರಾಗ್ ಜೈನ್ ನನ್ನು ಇಳಿಸಿದ್ದಾರೆ.

ಬಳಿಕ ಮೂವರಲ್ಲಿ ಒಬ್ಬಾತ ಚಿರಾಗ್ ಜೈನ್‌ನನ್ನು ಹೆದರಿಸಿ ಕಾರಿನಲ್ಲಿ ಕುಳಿತುಕೊಂಡು ಹುಣಸೂರು ರಸ್ತೆಯ ಮೂಲಕ ಹೂಟಗಳ್ಳಿ ಕಡೆ ಬಂದಿದ್ದಾರೆ.ಜೊತೆಗಿದ್ದವರು ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದಾರೆ.

ಹೂಟಗಳ್ಳಿ ಬಳಿ ಕಾರನ್ನು ನಿಲ್ಲಿಸಿ ಹಣ,ಆಭರಣ ದೋಚಿ ಬೆಳಗಿನ ಜಾವ 5 ಗಂಟೆಯವರೆಗೆ ಅಲ್ಲೇ ಇರಿಸಿಕೊಂಡು ಬಳಿಕ ಕಾರಿನ ಕೀ ಕೊಟ್ಟು ಕಳುಹಿಸಿದ್ದಾರೆ.

ಚಿರಾಗ್ ಜೈನ್ ನೀಡಿದ ದೂರಿನ ಮೇರೆಗೆ ವಿವಿ ಪರಂ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Share this with Friends

Related Post