ಮೈಸೂರು, ಮೇ.5: ನಮ್ಮ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬರುವ ಪ್ರವಾಸಿಗರು ಬಹಳ ಎಚ್ಚರಿಕೆಯಿಂದ ಇರಬೇಕು.
ಏಕೆಂದರೆ ಪ್ರವಾಸಿಗರು ಮೈ ಮರೆತರೆ ನಿಮ್ಮ ವ್ಯಾನಿಟಿ ಬ್ಯಾಗ್ ಅಥವಾ ಪರ್ಸ್ ಗಳು, ಪುರುಷರ ಹಿಂಭಾಗದ ಪಾಕೆಟ್ ಗಳಿಗೆ ಕತ್ತರಿ ಬೀಳುವುದು ಖಚಿತ.
ಇದಕ್ಕೊಂದು ಉದಾಹರಣೆ ಇದೆ, ಇತ್ತೀಚೆಗೆ ನಮ್ಮ ಸ್ನೇಹಿತರೊಬ್ಬರು ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯಲು ಬೆಟ್ಟಕ್ಕೆ ಹೋಗಿದ್ದರು.
ತಾಯಿಯ ದರ್ಶನ ಪಡೆದು ನೆಮ್ಮದಿಯಿಂದ ವಾಪಸ್ ಆಗುತ್ತಿದ್ದಾಗ ಯಾರೋ ಚಾಲಾಕಿ ಅವರ ವ್ಯಾನಿಟಿ ಬ್ಯಾಗ್ ಗೆ ಹಿಂಭಾಗದಿಂದ ಬ್ಲೇಡಿನಿಂದಲೋ ಅಥವಾ ಯಾವುದೊ ಹರಿತವಾದ ವಸ್ತುವಿನಿಂದ ಕೊಯ್ದು ಅದರಲ್ಲಿದ್ದ ಹಣ ಮತ್ತು ಮೊಬೈಲ್ ದೋಚಿದ್ದಾರೆ.
ಮೊಬೈಲ್ ದೋಚಿದ್ದರಿಂದ ವ್ಯಾನಿಟಿ ಬ್ಯಾಗ್ ನ ಬಾರ ಕಡಿಮೆಯಾಗಿದೆ ಇದೇನು ಇದ್ದಕ್ಕಿದ್ದಂತೆ ಭಾರವಿಲ್ಲವಲ್ಲ ಎಂದುಕೊಂಡು ನೋಡಿದಾಗ ಹೊರಗಿನಿಂದಲೇ ಬ್ಲೇಡ್ ನಿಂದ ಕೊಯ್ದಿರುವುದು ಗೊತ್ತಾಗಿದೆ.
ಬ್ಯಾಗ್ ನಲ್ಲಿ 600 ರೂ ಮತ್ತು ದೇವರ ಪ್ರಸಾದ ಇತ್ತಂತೆ, ಬ್ಯಾಗ್ ನ ಒಳಭಾಗದ ಇನ್ನೊಂದು ಪಾಕೆಟ್ ನಲ್ಲಿ ಚಿಲ್ಲರೆ ಹಣ ಇದ್ದಿದ್ದರಿಂದ ಬಸ್ ಹತ್ತಿ ಮನೆಗೆ ಬಂದಿದ್ದಾರೆ.
ನಂತರ ನಡೆದ ವಿಷಯವನ್ನು ಎಲ್ಲರಿಗೂ ತಿಳಿಸಿ ಭಕ್ತರು ಹಾಗೂ ಪ್ರವಾಸಿಗರು ಬೆಟ್ಟಕ್ಕೆ ಬರುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದರು.
ಆಕೆ ಬೆಟ್ಟಕ್ಕೆ ಹೋದ ದಿನ ಅಂತಹ ರಶ್ ಇರಲಿಲ್ಲವಂತೆ, ತಾಯಿಯನ್ನು ದರ್ಶನ ಮಾಡಿ ದೇವಸ್ಥಾನ ಬಳಸಿ ಗಣಪತಿ ಗುಡಿ ಬಳಿಗೆ ಬರುವ ಒಂದೆರಡು ಸೆಕೆಂಡ್ ಮುಂಚೆ ಈ ಘಟನೆ ನಡೆದಿದೆ.
ಅವರ ಹಿಂದೆ ಒಂದಿಬ್ಬರು ಮಹಿಳೆಯರು ಕೆಲವು ಪುರುಷರು ಹಿಂದಿನಿಂದ ಬರುತ್ತಿದ್ದರಂತೆ, ಯಾರು ಯಾವಾಗ ಈ ಕೆಟ್ಟ ಕೆಲಸ ಮಾಡಿದ್ದಾರೆ ಎಂಬುದು ಆಕೆಗೆ ಗೊತ್ತಾಗಿಲ್ಲ.
ಒಂದು ವೇಳೆ ಹೆಚ್ಚು ಹಣ ಅಥವಾ ಒಡವೆ ಏನಾದರೂ ಕಳವಾಗಿದ್ದರೆ ಮನೆಗೆ ಬರುವುದಾದರೆ ಹೇಗೆ ಎಂದು ಆಕೆ ಗಾಬರಿಗೊಂಡಿದ್ದರು.
ಸದ್ಯ ನನ್ನ ಪುಣ್ಯ ಬೇರೆ ಪಾಕೆಟ್ ನಲ್ಲಿ ಸ್ವಲ್ಪ ಹಣ ಇದ್ದಿದ್ದರಿಂದ ಮನೆಗೆ ಬಂದೆ. ಆಭರಣವಾಗಲೀ, ಬೆಲೆ ಬಾಳುವ ವಸ್ತುಗಳು ಮತ್ತೇನು ಕಳುವಾಗಿಲ್ಲಾ ಅದೇ ಪುಣ್ಯ ಎಂದು ನಿಟ್ಟುಸಿರು ಬಿಟ್ಟರು.