Fri. Nov 1st, 2024

ಪೆನ್‍ಡ್ರೈವ್ ಪ್ರಕರಣದಲ್ಲಿ ಷಡ್ಯಂತ್ರ- ಡಿಕೆಶಿ ವಿರುದ್ಧ ಗಂಭೀರ ಆರೋಪ

Share this with Friends

ಬೆಂಗಳೂರು,ಮೇ.6: ಪೆನ್‍ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ದ ಷಡ್ಯಂತ್ರ ಮಾಡಲಾಗಿದೆ ಎಂದು ವಕೀಲ ದೇವರಾಜೇಗೌಡ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇರವಾಗಿ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದರು.

ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಭೆಯನ್ನ ಗೌಪ್ಯವಾಗಿ ಕರೆದಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸಲ್ಲಿ ಯಾರನ್ನ ಆರೋಪಿಗಳಾಗಿ ಮಾಡಬೇಕು, ಬಿಡಬೇಕು ಅಂತ ಚರ್ಚೆಯಾಗಿದೆ ಎಂದು ದೂರಿದರು.

ನನ್ನ ಜೀವನದ ಹೋರಾಟ ಇದ್ದದ್ದು ಎಚ್.ಡಿ ರೇವಣ್ಣ ವಿರುದ್ಧ ಆಗಿತ್ತು. ನನ್ನ ಹೋರಾಟಕ್ಕೆ ನಿಜವಾದ ನ್ಯಾಯ ಸಿಕ್ಕಿದೆ ಎಂದುಕೊಂಡಿದ್ದೆ, ಇದನ್ನೇ ಕೆಲ ಕಿಡಿಗೇಡಿ ರಾಜಕಾರಣಿಗಳು ಅಸ್ತ್ರವಾಗಿ ಇಟ್ಕೊಂಡಿದ್ದಾರೆ ಎಂದು ಕಿಡಿಕಾರಿದರು.

ಎಸ್ ಐಟಿ ಮುಖ್ಯಸ್ಥರು ಹಾಗೂ ತನಿಖಾಧಿಕಾರಿಗಳನ್ನ 2 ಬಾರಿ ಭೇಟಿಯಾಗಿದ್ದೀನಿ, ಸಾಕ್ಷಿಯನ್ನಾಗಿ ನನ್ನ ಹೇಳಿಕೆ ಪಡೆದಿದ್ದಾರೆ, ಕೆಲವು ಕಹಿ ಸತ್ಯ ಹೇಳಬೇಕಿದೆ, ತಡೆಯಾಜ್ಞೆ ಇದ್ದರೂ ಕೂಡಾ ಅಶ್ಲೀಲ ವೀಡಿಯೋ ಪೆನ್ ಡ್ರೈವ್ ಹಂಚಿರುವ ಬಗ್ಗೆ ಹಾಸನದಲ್ಲಿ ಎಫ್ ಐಆರ್ ಆಗಿದೆ. ಅಶ್ಲೀಲ ವೀಡಿಯೋ ಆಗಿದ್ದರೂ ಹೆಣ್ಣು ಮಕ್ಕಳ ಮುಖವನ್ನು ಮರೆ ಮಾಚಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ತಿಕ್ ನನ್ನ ಕಚೇರಿಗೆ ಬಂದು ನನ್ನ ಕೈಗೆ ಕಾಪಿ ಕೊಟ್ಟಿದ್ದ, ಇದರ ಜೊತೆಗೆ ಒಂದು ಪೆನ್ ಡ್ರೈವ್ ಸಹಾ ಕೊಟ್ಟಿದ್ದ, ನಾನು ವಿಚಾರಣೆಗೆ ಹೋದಾಗ ನನ್ನ ಹೇಳಿಕೆ ಪಡೆದಿದ್ದಾರೆ, ದಾಖಲೆ ಕೊಟ್ಟಿದ್ದೇನೆ, ನಾನು ಹೇಳಿಕೆಯಲ್ಲಿ ಬಹಳ ಪ್ರಮುಖ ಅಂಶವನ್ನ ಉಲ್ಲೇಖ ಮಾಡಿದ್ದೇನೆ. ಕಾರ್ತಿಕ್ ನನ್ನ ಮನೆಗೆ ಬಂದಿರುವ ವೀಡಿಯೋ ಇದು ಎಂದು ಹೇಳುತ್ತಾ ದೇವರಾಜೇಗೌಡ ಅವರು ತಮ್ಮ ಲ್ಯಾಪ್ ಟಾಪ್ ನಲ್ಲಿ ಕಾರ್ತಿಕ್ ಮನೆಗೆ ಬಂದಿರುವ ವೀಡಿಯೊ ಪ್ರದರ್ಶಿಸಿದರು.

ಇದಕ್ಕೆಲ್ಲಾ ಕಾರಣ ಸರ್ಕಾರದ ಮಹಾನ್ ನಾಯಕ ಎಂದು ಕಾರ್ತಿಕ್ ವೀಡಿಯೋದಲ್ಲಿ ಹೇಳಿದ್ದಾನೆ. ಪುಟ್ಟರಾಜು @ ಪುಟ್ಟಿ ಅನ್ನೋರ ಮೂಲಕ ಪೆನ್ ಡ್ರೈವ್ ಬೆಂಗಳೂರಿಗೆ ಬಂತು. ಮುಖ್ಯಮಂತ್ರಿಗಳು ರಹಸ್ಯ ಸ್ಥಳದಲ್ಲಿ ಸೀನಿಯರ್ ಅಧಿಕಾರಿಗಳ ಭೇಟಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇದರ ಕಥಾನಾಯಕರೇ ಡಿಸಿಎಂ ಡಿಕೆಶಿ, ಸಿಎಂ ಸಿದ್ದರಾಮಯ್ಯ ಹಾಗೂ ಮತ್ತೋರ್ವ ಮಧ್ಯವರ್ತಿ. ದೇವರಾಜೇಗೌಡನನ್ನ ಆರೋಪಿ ಮಾಡ್ಬೇಕು ಕೇಸ್ ಮುಗಿಸಬೇಕು ಅನ್ನೋದು ಅವರ ಅಜೆಂಡಾ. ನನಗೆ ಕ್ಯಾಬಿನೆಟ್ ಪೋಸ್ಟ್ ಕೊಡುವ ಆಫರ್ ಮಾಡಿದ್ದರು ಎಂದು ದೇವರಾಜೇಗೌಡ ತಿಳಿಸಿದರು.

ಎಸ್ ಐಟಿ ಎಸ್‍ಪಿ ಒಬ್ಬರು ಡಿಕೆಶಿ ಹೆಸರು ವಾಪಸ್ ತೆಗೆಯಿರಿ ಅಂದ್ರು. ಎಲ್ ಆರ್ ಶಿವರಾಮೇಗೌಡ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಬೇಡ. ಡಿಕೆಶಿ, ಸಿದ್ದರಾಮಯ್ಯರನ್ನ ಸಿಲುಕಿಸಬೇಡ ಅಂದ್ರು. ಡ್ರೈವರ್ ನ ನಾವೇ ಕಳುಹಿಸಿದ್ದೀವಿ ಅಂತಾ ಎಲ್ ಆರ್ ಶಿವರಾಮೇಗೌಡ ಮಾತಾಡಿರುವ ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ, ಎಲ್ ಆರ್ ಶಿವರಾಮೇಗೌಡ ಮಧ್ಯವರ್ತಿಯಾಗಿ 10ಕ್ಕೂ ಹೆಚ್ಚು ಬಾರಿ ಭೇಟಿ ಮಾಡಿದ್ದಾರೆ. ಪೆನ್ ಡ್ರೈವ್ ಹಂಚಿರುವ ವ್ಯಕ್ತಿಗಳನ್ನ ಪತ್ತೆ ಮಾಡಲೇ ಇಲ್ಲ ಇವರು. ಅವರ ಲೊಕೇಷನ್, ಫೋನ್ ನಂಬರ್ ಕೊಟ್ಟರೂ ಪತ್ತೆ ಮಾಡಲೇ ಇಲ್ಲ. ಹಾಸನದಲ್ಲಿ ದಾಖಲಾಗಿರುವ ಎಫ್ ಐ ಆರ್ ಕೈ ಬಿಟ್ರು. ಇದೆಲ್ಲದರ ಸೂತ್ರಧಾರ ರಾಜ್ಯ ಸರ್ಕಾರ ಎಂದು ದೇವರಾಜೇಗೌಡ ಗಂಭೀರ ಆರೋಪ ಮಾಡಿದರು.

ನಿನ್ನೆ ಸಂಜೆವರೆಗೂ ನನ್ನ ಜೊತೆ ಸಂಧಾನ ಮಾಡಿದರು. ನಾನು ಒಪ್ಪದೇ ಹೋದಾಗ ನಿನ್ನೆ ಹಿರಿಯ ಅಧಿಕಾರಿಗಳ ಮೀಟಿಂಗ್ ಕರೆದಿದ್ದಾರೆ. ಮೂರು ದಿನದ ಹಿಂದೆ ರಾತ್ರಿ 12 .48ಕ್ಕೆ ಡಿಕೆಶಿ ಫೋನ್ ಮಾಡಿದ್ರು. ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿರೋದ್ರಿಂದ ಮೋದಿಯವರನ್ನ ಟಾರ್ಗೆಟ್ ಮಾಡಿ ಇಷ್ಟೆಲ್ಲ ಮಾಡಿ ನನ್ನನ್ನ ಜೊತೆ ಕರೆದ್ರು. ಅಲಯನ್ಸ್ ಮಾಡಿಕೊಂಡಿರೋದಕ್ಕೆ ಬಿಜೆಪಿ ಹಣಿಯಲು ಈ ರೀತಿ ಮಾಡಿದ್ದಾರೆ ಎಂದು ಅವರು ದೂರಿದರು.

ಮುಖ್ಯಮಂತ್ರಿಗಳೇ ಕೇಸನ್ನ ಸಿಬಿಐಗೆ ಕೊಡಿ. ಇಲ್ಲವಾದಲ್ಲಿ ನಾವೇ ವಕೀಲರು ಹೋರಾಟ ಮಾಡಿ ಸಿಬಿಐ ಗೆ ಕೊಡಿಸ್ತೀವಿ ಎಂದು ದೇವಾರಾಜೇಗೌಡ ಸವಾಲು ಹಾಕಿದರು.


Share this with Friends

Related Post