Wed. Dec 25th, 2024

ಪೆನ್ ಡ್ರೈವ್ ಪ್ರಕರಣ:ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೆಚ್ ಡಿ ಕೆ

Share this with Friends

ಬೆಂಗಳೂರು,ಮೇ.7: ವೈರಲ್ ಆಗಿರುವ ವೀಡಿಯೋದಲ್ಲಿ ನಮ್ಮ ಕುಟುಂಬದವರು ಇದ್ದರೂ ರಕ್ಷಣೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದರಲ್ಲದೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಏ.21 ರಂದು ಪೆನ್‍ಡ್ರೈವ್ ಅನ್ನು ಇಡೀ ರಾಜ್ಯಾದ್ಯಂತ ಬಿಡುಗಡೆ ಮಾಡಿದ್ದಾರೆ, ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ಹಂಚಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಪೂರ್ಣ ಚಂದ್ರ ಅಂತ ಪ್ರಜ್ವಲ್ ಏಜೆಂಟ್ ಇದ್ದರು. ಅವರು ಈ ಸಂಬಂಧ ಏಪ್ರಿಲ್ 22 ರಂದು ಹಾಸನ ಡಿಸಿಗೆ ದೂರು ಕೊಟ್ಟಿದ್ದಾರೆ, ಚುನಾವಣೆ ಅಧಿಕಾರಿಗಳೂ ದೂರು ಕೊಟ್ಟಿದ್ದಾರೆ. 21 ರಂದು ರಾತ್ರಿ ಪ್ರಜ್ವಲ್ ವಿಡಿಯೋ ಬಿಡುಗಡೆ ಕ್ಷಣಗಣನೆ ಅಂತ ಲಿಂಕ್ ಕೊಟ್ಟಿದ್ದಾರೆ.

ನೆಲದ ಕಾನೂನು ಪ್ರಕಾರ ಶಿಕ್ಷೆ ಆಗಲಿ. ನಮ್ಮ ನಾಡಿನ ತಾಯಂದಿರ ಮುಂದೆ ಹೇಳುವೆ ಯಾವ ವ್ಯಕ್ತಿಯನ್ನೂ ನಾನು ರಕ್ಷಣೆ ಮಾಡಲ್ಲ. ವೀಡಿಯೋ ಬಿಡುಗಡೆ ಮಾಡ್ತೀನಿ ಅಂತ ನವೀನ್ ಗೌಡ ರಾತ್ರಿ 8ಕ್ಕೆ ಹೇಳಿದ್ದಾನೆ. ಪ್ರಜ್ವಲ್ ಏಜೆಂಟ್ ದೂರು ಕೊಟ್ಟ ಮೇಲೆ ಎಫ್‍ಐಆರ್ ದಾಖಲಾಗಿದೆ. ನವೀನ್, ಕಾರ್ತಿಕ್, ಚೇತನ್, ಪುಟ್ಟರಾಜು ಮೇಲೆ ದೂರು ಕೊಟ್ಟರು, ಎಫ್‌ಐಆರ್‌ ಹಾಕಿದರೂ ಈವರೆಗೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಏ. 24ರಂದು ಚುನಾವಣಾ ಆಯೋಗದವರು ಹಿಂಬರಹವನ್ನು ಕೊಟ್ಟಿದ್ದಾರೆ. ಏಜೆಂಟ್ ದೂರು ಕೊಟ್ಟ ಮೇಲೆ ಸರ್ಕಾರದ ಗಮನಕ್ಕೆ ಹೋಯ್ತು. ಇದಾದ ಮೇಲೆ ಹಾಸನದಲ್ಲಿ 25 ಸಾವಿರಕ್ಕೂ ಹೆಚ್ಚು ಪೆನ್ ಡ್ರೈವ್ ಹಂಚಿಕೆಯಾಗಿದೆ. ಪ್ರಜ್ವಲ್ ಏಜೆಂಟ್ ದೂರು ಕೊಟ್ಟ ಮೇಲೆ ಯಾವುದೇ ಕ್ರಮ ಆಗಿಲ್ಲ, ಸಣ್ಣ ಪುಟ್ಟ ಕೇಸ್ ಗೆ ದೊಡ್ಡ ವಿಷಯ ಮಾಡೋರು ಈ ಕೇಸ್ ನಲ್ಲಿ ಕ್ರಮ ಮಾಡಿಲ್ಲ. ಪೆನ್ ಡ್ರೈವ್ ನಲ್ಲಿ ಯಾರ ಯಾರ ಪಾತ್ರ ಇದೆ ಸತ್ಯ ಹೊರಗೆ ಬರಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಪದೇ ಪದೇ ನನ್ನ ಬಗ್ಗೆ ಸಿಎಂ ಮಾತನಾಡಿದ್ದಾರೆ, ಡಿ.ಕೆ ಶಿವಕುಮಾರ್ ಏಕವಚನದಲ್ಲಿ ನನ್ನ ಬಗ್ಗೆ ಮಾತಾಡಿದ್ದಾರೆ, ಮಹಿಳೆಯರು ಹೋರಾಟ ಮಾಡಿ ಅಂತ ಕರೆ ಕೊಟ್ರು. ಇದೆಲ್ಲ ಆದ ಮೇಲೆ ಏ.26 ಚುನಾವಣೆ ಅಗೋವರೆಗೆ ನಮ್ಮ ಏಜೆಂಟ್ ಕೊಟ್ಟ ದೂರಿನ ಮೇಲೆ ಯಾವುದೇ ಕ್ರಮ ಆಗಿಲ್ಲ. ಏ.25 ರಂದು ಮಹಿಳಾ ಆಯೋಗದ ಅಧ್ಯಕ್ಷೆ ವಿಶೇಷ ತಂಡ ರಚನೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದರು.

ಚಿತ್ರೀಕರಣ ಮಾಡಿದ ವ್ಯಕ್ತಿ ಮತ್ತು ಪೆನ್ ಡ್ರೈವ್ ಬಿಡುಗಡೆ ಮಾಡಿದವರ ಮೇಲೆ ಕ್ರಮ ಆಗಬೇಕು ಅಂತ ಪತ್ರ ಬರೆದರು. ಈ ಪತ್ರದಲ್ಲಿ ರೇವಣ್ಣ, ಪ್ರಜ್ವಲ್ ರೇವಣ್ಣ ಹೆಸರು ಇಲ್ಲ. ಆದರೂ ಸಿಎಂ, ಪ್ರಜ್ವಲ್ ರೇವಣ್ಣ ಅಂತ ಟ್ವೀಟ್ ಮಾಡ್ತಾರೆ. ಏ.27 ರಂದು ಸಿಎಂ ಎಸ್‍ಐಟಿ ರಚನೆ ಮಾಡಿದಾರೆ ಎಂದು ಹೆಚ್ ಡಿ ಕೆ ಎಳೆ,ಎಳೆಯಾಗಿ ಬಿಡಿಸಿಟ್ಟರು.

28 ರಂದು ಬೆಂಗಳೂರಿನಲ್ಲಿ ಕುಳಿತುಕೊಂಡು ಡಿಜಿಟಲ್ ಮೂಲಕ ಇಲ್ಲಿ ಟೈಪ್ ಮಾಡಿ ಎರಡು ಹೆಣ್ಣು ಮಕ್ಕಳ ಹೆಸರಲ್ಲಿ ಹೊಳೆನರಸೀಪುರ ಸ್ಟೇಷನ್ ಗೆ ಕಳಿಸಿದ್ರು. ಎಸ್‍ಐಟಿ ಕೊಟ್ಟಾಗ ಪಾರದರ್ಶಕವಾಗಿ ನಡೆಯುತ್ತೆ ಅಂತಾ. ಆದರೆ ಆಮೇಲೆ ಗೊತ್ತಾಯ್ತು. ಎಸ್‍ಐಟಿ ಅಂದ್ರೆ ಸಿದ್ದರಾಮಯ್ಯ ಇನ್ವೆಸ್ಟಿಕೇಷನ್ ಟೀಂ ಹಾಗೂ ಡಿಕೆಶಿವಕುಮಾರ್ ಇನ್ವೆಸ್ಟಿಂಗ್ ಟೀಂ ಅಂತಾ ಎಂದು ಗೇಲಿ ಮಾಡಿದರು.

ಪ್ರಜ್ವಲ್ ವಿಷಯಕ್ಕೆ ಅಡಚಣೆ ಮಾಡಲ್ಲ, ಪ್ರಜ್ವಲ್ ನನ್ನ ನಾನು ವಹಿಸಿಕೊಳ್ಳಲ್ಲ, ಈ ಬಗ್ಗೆ ತನಿಖೆ ಆಗಲಿ ಎಂದು ಕುಮಾರಸ್ವಾಮಿ ಹೇಳಿದರು.

ಮೇ.2 ರಂದು ದೂರು ಹಾಕಿದ್ದಾರೆ. ದೂರು ಕೊಟ್ಟ ಹೆಣ್ಣು ಮಗಳು ಏ. 28 ಕ್ಕೆ ಬೇಲೂರಿನಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಜ್ವಲ್ ಪಕ್ಕದಲ್ಲಿ ಇರೋ ಹೆಣ್ಣು ಮಗಳು ಯಾರು? ಮೊದಲ ಪೆನ್ ಡ್ರೈವ್ ನಲ್ಲಿ ಬಿಡುಗಡೆಯಾದ ಮಹಿಳೆ 21ಕ್ಕೆ ಪ್ರಜ್ವಲ್ ಜೊತೆ ಪ್ರಚಾರ ಮಾಡಿದ್ರು. 22ಕ್ಕೆ ಅವಳ ವೀಡಿಯೋ ಲಿರೀಸ್ ಮಾಡಿದ್ರಿ. ಈಗ ಗನ್ ಪಾಯಿಂಟ್ ಅಂತ ಇನ್ನೊಂದು ದೂರು. ಇದು ನಿಮ್ಮ ದೂರು. ಡಿಕೆ ಶಿವಕುಮಾರ್ ಅವರೇ, ಸಿಎಂ ಅವರೇ ಇದು ನಿಮ್ಮ ತನಿಖೆ ಎಂದು ಹೆಚ್‍ಡಿಕೆ ತೀವ್ರ ತರಾಟೆಗೆ ತೆಗೆದುಕೊಂಡರು.

ಯಾರು ಕೂಡಾ ರೇವಣ್ಣ ಮೇಲೆ ನೇರವಾಗಿ ದೂರು ಕೊಟ್ಟಿಲ್ಲ,ಆದರೆ ಅಮೇಲೆ ಕಿಡ್ನಾಪ್ ಅಂತ ಸೃಷ್ಟಿ ಮಾಡಿದ್ದೀರಿ, ಕಿಡ್ನಾಪ್ ಆದ ಹೆಣ್ಣುಮಗಳನ್ನ ಎಲ್ಲಿಂದ ಕರೆದುಕೊಂಡು ಬಂದ್ರಿ. ತೋಟದ ಮನೆ ಅಂತಾರೆ. ತೋಟದ ಮನೆ ಮಹಜರ್ ಮಾಡಿದ್ರಾ, ಆಕೆ ಹೇಳಿಕೆ ಕೊಟ್ಟಿಲ್ಲವಾ, ನ್ಯಾಯಾಧೀಶರ ಮುಂದೆ ಆಕೆಯನ್ನ ಯಾಕೆ ಪ್ರೊಡ್ಯೂಸ್ ಮಾಡಲಿಲ್ಲ ಯಾರನ್ನ ಕರೆತಂದು ಒತ್ತಡ ಹಾಕಿಸಿದ್ದೀರಾ ಎಂದು ಕಾರವಾಗಿ ಪ್ರಶ್ನಿಸಿದರು.

ಏ. 30ರಂದು ಕಾರ್ತಿಕ್ ಪ್ರೆಸ್ ಮುಂದೆ ಬರದೇ ವೀಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ರಿ. ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ. ಅವನು ಎಲ್ಲಿ ಇದ್ದಾನೆ ಅಂತ ಎಸ್‍ಐಟಿ ಹುಡುಕಿಲ್ಲ. ಸರ್ಕಾರಕ್ಕೆ ಕೇಳ್ತೀನಿ ಈ ಕೇಸ್ ರೇವಣ್ಣ, ಪ್ರಜ್ವಲ್ ಮೇಲೆ ಮಾತ್ರ ಮಾಡ್ತಿರೋದೋ ಅಥವಾ ಮಹಿಳಾ ಆಯೋಗ ಪತ್ರ ಬರೆದ ರಾಜಕಾರಣಿ ಮೇಲೋ ಅಥವಾ ಪೆನ್ ಡ್ರೈವ್ ಬಿಡುಗಡೆ ಮಾಡಿರೋರ ಮೇಲೆ ತನಿಖೆ ಆಗುತ್ತೋ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಅಲ್ಲದೇ 21 ರಂದು ವಿಡಿಯೋ ಬಿಡುಗಡೆ ಮಾಡ್ತೀನಿ ಎಂದ ನವೀನ್ ಗೌಡ ಯಾಕೆ ಬಂಧನ ಮಾಡಿಲ್ಲ ಎಂದು ಪ್ರಶ್ನಿಸಿದರು.

ಪೆನ್‌ ಡ್ರೈವ್‌ ಪ್ರಕರಣದಲ್ಲಿ16 ವರ್ಷದ ಸಂತ್ರಸ್ತರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಯಾಕೆ ರಾಹುಲ್‌ ಗಾಂಧಿಗೆ ನೋಟಿಸ್‌ ನೀಡಿಲ್ಲ ಎಂದು ವಿಶೇಷ ತನಿಖಾ ತಂಡವನ್ನು ಕೂಡಾ ಕುಮಾರಸ್ವಾಮಿ ಪ್ರಶ್ನಿಸಿದರು.


Share this with Friends

Related Post