ಬೆಂಗಳೂರು,ಮೇ.8: ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ವಸಂತ ಬಂಗೇರ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಸಂತ ಬಂಗೇರ ಅವರು ಅನಾರೋಗ್ಯದಿಂದ ಇಂದು ಸಂಜೆ 4 ಗಂಟೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 79 ವರ್ಷ ವಯಸ್ಸಾಗಿತ್ತು. ಬಂಗೇರ ಅವರು ಅನಾರೋಗ್ಯ ಹಿನ್ನೆಲೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕುವೆಟ್ಟು ಗ್ರಾಮದ ವಸಂತ ಬಂಗೇರ ಅವರು, 1946 ಜನವರಿ 15 ರಂದು ಜನಿಸಿದ್ದರು.
ಇತ್ತೀಚೆಗೆ ವಸಂತ ಬಂಗೇರ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು.
ಪತ್ನಿ ಸುಜಿತಾ ವಿ.ಬಂಗೇರ ಹಾಗೂ ಇಬ್ಬರು ಪತ್ನಿಯರು,ಬಂಧುಗಳು,ಅಪಾರ ಅಭಿಮಾನಿಗಳನ್ನು ವಸಂತ್ ಬಂಗೇರ ಅಗಲಿದ್ದಾರೆ.
ನಾಳೆ ವಸಂತ ಬಂಗೇರ ಅವರ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸಲಿದ್ದು ಬಳಿಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕೆ.ವಸಂತ ಬಂಗೇರ ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1983, 1985ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಶಾಸಕರಾಗಿದ್ದರಲ್ಲದೆ 2013ರಲ್ಲೂ ಕೂಡಾ ಕಾಂಗ್ರೆಸ್ನಿಂದಲೇ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ವಸಂತ್ ಬಂಗೇರಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.