ಬೆಂಗಳೂರು, ಫೆ.10: ಕೆಂಗಲ್ ಹನುಮಂತಯ್ಯನವರು ದಕ್ಷ ಆಡಳಿತಗಾರರಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.
ಹನುಮಂತಯ್ಯನವರು ಕರ್ನಾಟಕವನ್ನು ಅತ್ಯಂತ ದಕ್ಷತೆಯಿಂದ ಸುಮಾರು ನಾಲ್ಕೂವರೆ ವರ್ಷ ಆಳಿದವರು ಎಂದು ಸಿಎಂ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯ ಅವರ ಜನ್ಮದಿನಾಚಾರಣೆ ಅಂಗವಾಗಿ ಇಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.
ರಾಮನಗರ ಜಿಲ್ಲೆಯವರಾದ ಅವರು ಸಂವಿಧಾನ ಜಾರಿಯಾದ ನಂತರ ಮುಖ್ಯಮಂತ್ರಿಯಾದವರು. ಅವರ ಕಾಲದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯ ಮಂತ್ರಿಯಾದವರು. ವಿಧಾನಸೌಧ ಕಟ್ಟಿಸಿದ್ದೇ ಅವರು, ಆದರೆ ದುರ್ದೈವ, ಅದನ್ನು ಅವರು ಉದ್ಘಾಟಿಸಲು ಬಿಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಂಗಲ್ಲರ ಆಡಳಿತ ನಮಗೆಲ್ಲಾ ಮಾದರಿ. ವಿಧಾನಸೌಧದ ಪೂರ್ವದಿಕ್ಕಿನಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆಸಿದ್ದು, ಜನಸೇವೆಯೇ ಜನಾರ್ಧನ ಸೇವೆ ಎಂದು ಅದರ ಅರ್ಥ.
ಬದ್ಧತೆ, ನಿಷ್ಠುರತೆಯಿಂದ ಸರ್ಕಾರದ ಕೆಲಸ ಮಾಡಿದ್ದರು. ಹಳೇ ಮೈಸೂರು ಭಾಗದವರಾದರೂ ವಿಶಾಲ ಕರ್ನಾಟಕವಾಗಬೇಕೆಂದು ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಕೆಂಗಲ್ ಹನುಮಂತಯ್ಯ ಅವರ ಕುಟುಂಬದವರು ಹಾಜರಿದ್ದರು.