Fri. Nov 1st, 2024

ಭಗವದ್ಗೀತೆ ಉಳಿದಿರುವುದು ಶಂಕರ ಭಗವತ್ಪಾದರಿಂದ:ದತ್ತ ವಿಜಯಾನಂದ ಶ್ರೀ

Share this with Friends

ಮೈಸೂರು, ಮೇ.13: ಭಗವದ್ಗೀತೆ ಉಳಿದಿರುವುದು ಶಂಕರ ಭಗವತ್ಪಾದರಿಂದ ಎಂದು ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ನುಡಿದರು.

ಶಂಕರ ಜಯಂತಿ ಪ್ರಯುಕ್ತ ರಾಮಕೃಷ್ಣ-ಶಾರದಾದೇವಿ ವಿಪ್ರ ವೃಂದದ ವತಿಯಿಂದ ಹಮ್ಮಿಕೊಂಡಿದ್ದ ಶಂಕರ ಮೂರ್ತಿಯ ಮೆರವಣಿಗೆಗೆ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಚಾಲನೆ ನೀಡಿದ ಶ್ರೀಗಳು ಮಾತನಾಡಿದರು.

ಭಗವದ್ಗೀತೆ ಬಗ್ಗೆ ದೇಶದಾದ್ಯಂತ ಅಪವ್ಯಾಖ್ಯಾನ ನಡೆಯುತ್ತಿದ್ದ ಸಂದರ್ಭದಲ್ಲಿ ಅವತರಿಸಿ ಭಗವದ್ಗೀತೆಯ ಸರಿಯಾದ ವಿವರವನ್ನು ನೀಡಿ ಇಂದಿನ ಪೀಳಿಗೆವರೆಗೂ ಭಗವದ್ಗೀತೆಯನ್ನು ಉಳಿಸಿದ್ದು ಶಂಕರಾಚಾರ್ಯರು ಎಂದು ತಿಳಿಸಿದರು.

ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿ ಹಿಂದೂ ಧರ್ಮ ಪುನರುತ್ಥಾನಗೊಳಿಸಿದರು. ಇಂದು ರಾಮಾನುಜರು ಅವತರಿಸಿದ ದಿನ ಕೂಡ, ಇಂತಹ ಪುಣ್ಯ ದಿನದಂದು ರಾಮಕೃಷ್ಣ – ಶಾರದಾದೇವಿನಗರ ಭಾಗದಲ್ಲಿ ವಿಪ್ರರು ಒಂದಾಗಿ ಸಮಸ್ತ ಹಿಂದೂಗಳನ್ನು ಒಗ್ಗೂಡಿಸಿ ಧರ್ಮದ ಕೆಲಸ ಮಾಡಬೇಕೆಂದು ಶ್ರೀಗಳು ಕರೆ ನೀಡಿದರು.

ಶಂಕರಾಚಾರ್ಯರ ಮೂರ್ತಿಯೊಂದಿಗೆ ಹರ ಹರ ಶಂಕರ ಜಯ ಜಯ ಶಂಕರ ಘೋಷಣೆಯೊಂದಿಗೆ ಮೆರವಣಿಗೆಯು ರಾಮಕೃಷ್ಣನಗರದ ಐ ಬ್ಲಾಕ್ ನ ಮುಖ್ಯ ರಸ್ತೆಗಳಲ್ಲಿ ಸಾಗಿ ಶಾರದಾದೇವಿನಗರದ ನಮೋ ಉದ್ಯಾನವನದಲ್ಲಿ ಸಮಾಪ್ತಿಗೊಂಡಿತು.

ನಂತರ ವೇದವ್ಯಾಸ ಭಜನಾ ಮಂಡಳಿ, ಶಾರದಾದೇವಿ ಮಹಿಳಾ ಸಮಾಜ, ಶ್ರೀದೇವಿ ಮಹಿಳಾ ಸಮಾಜ ಸೇರಿದಂತೆ ಭಕ್ತರು ಶಂಕರರ ಸ್ತೋತ್ರಗಳ ಪಾರಾಯಣ, ಭಜನೆಗಳನ್ನು ಹಾಡಿದರು ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್, ಎಂಐಟಿ ಕಾಲೇಜಿನ ಮುಖ್ಯಸ್ಥರಾದ ಮುರಳಿ, ರಘುರಾಮ್ ವಾಜಪೇಯಿ, ರಾಮಕೃಷ್ಣ-ಶಾರದಾದೇವಿ ವಿಪ್ರ ವೃಂದದ ಅಧ್ಯಕ್ಷ ರಾಕೇಶ್ ಭಟ್, ಗೋಪಾಲ್ ರಾವ್, ಸೂಯೋಗ್ ಆಸ್ಪತ್ರೆಯ ಡಾ| ಎಸ್.ಪಿ.ಯೋಗಣ್ಣ, ಬಿಜೆಪಿ ಮುಖಂಡ ಬಿ.ಎಂ.ರಘು, ಯೋಗಾನರಸಿಂಹಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಶ್ರೀನಿವಾಸನ್ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post