ಬೆಂಗಳೂರು,ಮೇ.14: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ ರೀತಿ ಮಾಡಿದ್ದಾರೆ, ಇದೆಲ್ಲದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂದು ದೂರಿದರು.
ವಕೀಲ ದೇವರಾಜೇಗೌಡರನ್ನು ಈಗ ಒಂದು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿದ್ದು ಯಾಕೆ, ಒಂದು ತಿಂಗಳಿನಿಂದ ಏನೆಲ್ಲಾ ಬೆಳವಣಿಗೆ ಆಯಿತು ಆಡಿಯೋ ಮೂಲಕ ಸಿಕ್ಕಿಬಿದ್ದ ದೊಡ್ಡ ತಿಮಿಂಗಲವನ್ನು ಬಿಟ್ಟು ದೇವರಾಜೇಗೌಡರನ್ನು ಬಂಧನ ಮಾಡಿದ್ದಾರೆ ಎಂದು ಹರಿಹಾಯ್ದರು.
ವಿಡಿಯೋದಲ್ಲಿ ಬಂದಂತಹ ಮಹಿಳೆಯರ ಕುಟುಂಬಗಳ ಬಗ್ಗೆ ಸರಕಾರಕ್ಕೆ ಅನುಕಂಪ ಇದೆಯಾ,ಈ ಪ್ರಕರಣ ಸಂಬಂಧ ನಾನು ಯಾರನ್ನೂ ವಹಿಸಿಕೊಳ್ಳುವ ಪ್ರಶ್ನೆಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆ ಮಹಿಳೆಯರಿಗೆ ನ್ಯಾಯ ಸಿಗುವಂತೆ ಆಗಬೇಕು. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೊಂದ ಮಹಿಳೆ ದೂರು ಕೊಟ್ಟಿದ್ದಾರೆ. ಆ ಹೆಣ್ಣುಮಗಳಿಗೆ ಹೆದರಿಸಿ ಅವರಿಂದ ದೂರು ಪಡೆಯಲು ಪ್ರಯತ್ನ ಮಾಡಿದ್ದಾರೆ. ಅವರಿಗೆ ಹೆದರಿಸಿ ಬೆದರಿಸಿದವರು ಯಾರು ಇದೆಲ್ಲಾ ಎಸ್ ಐಟಿಗೆ ಗೊತ್ತಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕೆಲವೇ ದಿನಗಳಲ್ಲಿ ಇದೆಲ್ಲಾ ಹೊರಗೆ ಬರಲಿದೆ,ಮಹಿಳೆಯರಿಗೆ ಬೆದರಿಸಿದ್ದು, ಧಮ್ಕಿ ಹಾಕಿದ್ದು ಎಲ್ಲವೂ ಆಚೆ ಬರಲಿದೆ. ನೀವು ಅದರ ಬಗ್ಗೆ ಏನು ಕ್ರಮ ತಗೊಂಡಿದ್ದೀರಿ ಗೃಹ ಸಚಿವರೇ ಎಂದು ಡಾ.ಜಿ.ಪರಮೇಶ್ವರ ಅವರನ್ನು ಕುಮಾರಸ್ವಾಮಿ ಪ್ರಶ್ನಿಸಿದರು.
ಹಾಸನದಲ್ಲಿ ಪೆನ್ ಡ್ರೈವ್ ಗಳನ್ನು ಹಂಚಿರುವ ವ್ಯಕ್ತಿಗಳು ಎಲ್ಲಿ, ಎಫ್ ಐಆರ್ ದಾಖಲಾಗಿರುವ ಒಬ್ಬ ವ್ಯಕ್ತಿಯನ್ನೂ ಎಸ್ ಐಟಿ ಹಿಡಿಯಲಿಲ್ಲ. ವಿಡಿಯೋಗಳನ್ನು ಮೊದಲು ಕದ್ದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣನಾದ ಕಾರು ಚಾಲಕನನ್ನು ಇದುವರೆಗೂ ತನಿಖಾ ತಂಡ ಬಂಧನ ಮಾಡಿಲ್ಲ, ಆದರೆ, ಖಾಸಗಿ ಚಾನಲ್ ನಲ್ಲಿ ಒಂದೂವರೆ ಗಂಟೆ ಕೂರಿಸಿಕೊಂಡು ಸಂದರ್ಶನ ಮಾಡುತ್ತಾರೆ. ಎಸ್ ಐಟಿ ತಂಡಕ್ಕೆ ಸಿಗದ ಆ ವ್ಯಕ್ತಿ ಸುಲಭವಾಗಿ ಖಾಸಗಿ ಚಾನೆಲ್ ಗೆ ಸಿಗುತ್ತಾನೆ ಎಂದರೆ ಇಲ್ಲಿ ಏನು ನಡೆಯುತ್ತಿದೆ ಅವರು ನೇರ ಪ್ರಶ್ನೆ ಹಾಕಿದರು.
ಇನ್ನೇನು ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಹೊರಬರುತ್ತವೆ ಎಂದು ಫೇಸ್ ಬುಕ್ಕಿನಲ್ಲಿ ಸಮಯದ ಸಮೇತ ಪೋಸ್ಟ್ ಹಾಕಿದ್ದ ನವೀನ್ ಗೌಡ ನಮ್ಮ ಪಕ್ಷದ ಶಾಸಕರಿಗೆ ಪೆನ್ ಡ್ರೈವ್ ಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. ಅವನು ಏನೆಲ್ಲಾ ಹೇಳಿದ್ದಾನೆ, ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲಾ ಪೋಸ್ಟ್ ಮಾಡಿದ್ದಾನೆ ಎನ್ನುವುದು ಎಸ್ ಐಟಿಗೆ ಗೊತ್ತಿಲ್ಲವೇ ಆತನನ್ನು ಹಿಡಿದಿದ್ದಾರ ಎಂದು ಕುಮಾರಸ್ವಾಮಿ ಕೇಳಿದರು.
ಬಿಜೆಪಿಯ ಮಾಜಿ ಶಾಸಕರೊಬ್ಬರ ಎಡಬಲದಲ್ಲಿ ಇದ್ದ ಇಬ್ಬರನ್ನು ಹಿಡಿಯಲಾಗಿದೆ ಎಂಬುದನ್ನು ಮಾಧ್ಯಮಗಳ ಮೂಲಕ ಗಮನಿಸಿದೆ, ಇನ್ನೊಂದು ವಾರದಲ್ಲಿ ಮುಖ್ಯವಾದವರನ್ನು ಹಿಡಿಯಲಾಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ. ಹಾಗಾದರೆ, ಎಸ್ ಐಟಿ ತನಿಖೆಯ ಎಲ್ಲಾ ಅಂಶಗಳು ಇವರಿಗೆ ಹೇಗೆ ಸೋರಿಕೆ ಆಗುತ್ತಿವೆ ಇದಕ್ಕೆ ಸರಕಾರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.